ಪ್ರಸಂಗ ೧:

ಹದಿನೈದು ವರ್ಷದ ಹಿಂದಿನ ಮಾತು. ೨೦೦೧ರಲ್ಲಿ ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ಮೂರು ತಿಂಗಳು ಕಲಾ ರೆಸಿಡೆನ್ಸಿಯಲ್ಲಿದ್ದೆ. ಹಿಂದಿರುಗುವ ಮುಂಚಿನ ದಿನವಷ್ಟೇ ಮಿಕ್ಕೋ ಜಿಂಗರ್ ಆಕಸ್ಮಿಕವಾಗಿ ಪರಿಚಯವಾದ. ಫಿನ್ಲೆಂಡಿನ ರಾಜಧಾನಿಯಲ್ಲಿ ‘ನೈ ಟಿಡ್’ ಎಂಬ ಸ್ವೀಡಿಷ್ ಪತ್ರಿಕೆಯ ಸಂಪಾದಕನಾಗಿದ್ದನಾತ. ಬೆಂಗಳೂರಿನಲ್ಲಿ ತಮಿಳು ಪತ್ರಿಕೆ ನಡೆಸಿದಂತಿತ್ತು ಆತನ ವೃತ್ತಿ. ಆತನ ಆಫೀಸಿನಲ್ಲಿ ಮೌಸ್ ಪ್ಯಾಡ್ ಮೇಲೆ ರಜನೀಕಾಂತ್ ಚಿತ್ರವಿತ್ತು. ವರ್ಷಕ್ಕೊಂದಾವರ್ತಿ ಭಾರತಕ್ಕೆ ವಿದ್ಯಾರ್ಥಿಗಳನ್ನು ಕರೆತರುವ ಆತ ಗಣೇಶ ಬೀಡಿ ಸೇದುತ್ತಿದ್ದ. ಆತ ಬಂದಾಗಲೆಲ್ಲ ಆತನನ್ನು ನೊಡಿಕೊಳ್ಳುತ್ತಿದ್ದ ಹೆಂಗಸೊಬ್ಬಳಿಗೆ ಕೇರಳದಲ್ಲಿ ಎಮ್ಮೆಯೊಂದನ್ನು ಕೊಡಿಸಿಕೊಟ್ಟಿದ್ದ.

ಪ್ರಸ್ತುತ ಮರುದಿನ ಬೆಳಿಗಿನ ವಿಮಾನದಲ್ಲಿ ನಾನು ಹಿಂದಿರುಗಬೇಕಿತ್ತು. ರಾತ್ರಿಯೆಲ್ಲ ಆತ ನನ್ನನ್ನು ವಿಚಾರಿಸುತ್ತಿದ್ದದ್ದು ಆಗಿನ್ನೂ ವೀರಪ್ಪನ್ ಬಂಧನದಲ್ಲಿದ್ದ ಅಣ್ಣಾವ್ರ ಬಗ್ಗೆಯೇ. ಭಾರತೀಯ ಸುದ್ಧಿ ಮಾಧ್ಯಮದ ಅಧಿಕೃತತೆಯ ಬಗ್ಗೆ ಆತನಿಗೆ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಆತನಿಗೆ ಮೈಯೆಲ್ಲ ಕಣ್ಣು, ಕಿವಿ. ಕೈಗೆ ಸಿಕ್ಕಿದ ಸೀಸದ ಕಡ್ಡಿಯಲ್ಲೇ ನೋಟ್ಸ್ ಮಾಡುತ್ತಿದ್ದ. ನಾನು ನನಗೆ ತಿಳಿದ, ಪೀತ ಪತ್ರಿಕೆಗಳು ವರದಿ ಮಾಡದ, ಸುದ್ಧಿಗಳೊಂದಿಗೆ, ನನ್ನ ಬಾಲ್ಯದ ರಾಜ್ಕುಮಾರ್ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆ. ಕಮಲಹಾಸನ್ (ಸ್ವಾತಿಮುತ್ಯಂ) ಮತ್ತು ರಾಜಣ್ಣನವರ (ಬಂಗಾರದ ಪಂಜರ) ನಡುವೆ ಯಾರು ಬೆಟರ್ ನಟ ಎಂದಾತ ಕೇಳಿದ್ದಕ್ಕೆ ನಾನು ನೀಡಿದ ಸಮಾಧಾನಕರ ಅಯೋಮಯ ಉತ್ತರವೂ, ನಾನು ಅಣ್ಣಾವ್ರ ಸಿನೆಮಗಳನ್ನು ನೋಡಿ ಕಲಿತದ್ದೆಂದು ಆತನನ್ನು ಮೆಚ್ಚಿಸಿಬಿಟ್ಟೆ.  

ಮೂರು ವರ್ಷದ ನಂತರ ಮತ್ತೊಮ್ಮೆ ನಾನು ಹೆಲ್ಸಿಂಕಿಗೆ ಹಿಂದಿರುಗಿದಾಗ ತಿಳಿದದ್ದೇನೆಂದರೆ, ನನ್ನ ಸಂದರ್ಶನದ ದೊಡ್ಡ ಪುಟವೊಂದರಲ್ಲಿ ಬರೀ ಡಾ. ರಾಜ್ ಅವರ ಕಥನವು, ಫಿನ್ನಿಶ್ ದೇಶದಲ್ಲಿ, ಸ್ವೀಡಿಷ್ ಭಾಷೆಯಲ್ಲಿ, ಭಾರತದ ಅಭಿಮಾನಿಯಾದ ಪರದೇಶೀಯನೊಬ್ಬನ ಬರವಣ ಗೆಯ ರೂಪದಲ್ಲಿ, ರಸಿಕರರಾಜರ ದೊಡ್ಡ ಫೋಟೋವೊಂದರ ಜೊತೆ ಪ್ರಕಟವಾಗಿತ್ತಂತೆ. ಮಿಕ್ಕೋನ ಹೃದಯ ಸಂಬಂಧಿ ವ್ಯಾದಿಯಿಂದಾಗಿ ನನ್ನ ಎರಡನೇ ಭೇಟಿಯಲ್ಲಿ ಆತನನ್ನು ಒಮ್ಮೆ ಮಾತ್ರ ಭೇಟಿಯಾಗಲು ಸಾಧ್ಯವಾಯಿತು. ಆದರೆ ನನ್ನ ನೆಪದಲ್ಲಿನ ರಾಜಕುಮಾರರ ಕುರಿತ ಆ ಬರಹದ ಪ್ರತಿ ಮಾತ್ರ ದೊರಕಲಿಲ್ಲ. ದೇವರ ಚಿತ್ರವನ್ನು ಬದಲಿಸಿ ರಾಜ್ ಚಿತ್ರವನ್ನು ಕುತ್ತಿಗೆಯ ದಾರಕ್ಕೆ ಅಳವಡಿಸಿ ಓಡಾಡುತ್ತಿದ್ದ ನನ್ನ ಬಾಲ್ಯದ ಅಭಿಮಾನದ ಘಟನೆಯ ವಿವರವನ್ನು ಓದಿದ್ದನ್ನು ಮಾತ್ರ ಕೆಲವರು ನೆನಪಿಟ್ಟುಕೊಂಡು ನನ್ನಲ್ಲಿ ಕೇಳಿದ್ದೇನೆಂದರೆ, “ಈಗಲೂ ನೀವು ಹಾಗೆಯೇ?” ಎಂದು. ಡಾ.ರಾಜ್ ಅವರನ್ನು ಅವರ ಅಭಿಮಾನಿ ವಯಲದ ಹೊರಗಿನಿಂದ ಗ್ರಹಿಸಬಹುದಾದುದು ನಿಶ್ಯಬ್ದದ ಪರಿಧಿಯಿಂದ ಒಳಗಿನಿಂದಷ್ಟೇ ಎಂಬಂತಾಗಿದೆಯೇ?

ರಾಜ್ ಸಮಾಧಿ, ಪ್ರಸ್ತುತ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತವಾದ ಅವರನ್ನು ಕುರಿತಾದ ಕಾಫಿ ಟೇಬಲ್ ಪುಸ್ತಕ, ಆಯ್ದ ಅವರ ಕಪ್ಪುಬಿಳುಪಿನ ಚಲನಚಿತ್ರಗಳ ಡಿಜಿಟಲ್ ವರ್ಣಸಂಯೋಜನೆಯ ಅವತಾರದ ತೆರೆಕಾಣುವಿಕೆ, ರಾಜ್ ಸಂಶೋಧನಾ ಕೇಂದ್ರದ ಅಪರಿಚಿತತೆ, ಅವರನ್ನು ಕುರಿತಾದ ಶೈಕ್ಷಣ ಕ ಸಂಶೋಧನೆ(ಗಳ) ಪ್ರಕಟಣೆಗಳ ಮೆಚ್ಚುಗೆಯ ಧ್ವನಿ, ಇತ್ಯಾದಿಯಾಗಿ ಆಗಿರುವ ಅವರ ಮರಣೋತ್ತರದ ಅಭಿಮಾನಿ ಕ್ರಿಯೆಗಳಲ್ಲಿ ಅಭಿನಂದನೆಗಳೇ ಹೆಚ್ಚಾಗಿದೆ. ಇದನ್ನೇ ಮೌನದ ಪರಿಧಿಯ ಒಳಗಿರಿಸುವ ಹುನ್ನಾರ ಎನ್ನುವುದು. ಒಂದು ಕಾಲಘಟ್ಟದ, ಜನಾಂಗದ ಅಭಿಮಾನಕ್ಕೆ ಮಾತ್ರ ಪಾತ್ರವಾಗದೆ, ಅಭಿಮಾನದ ರೂಪುರೇಷೆ ಹಾಗೂ ಅಸ್ಥಿತ್ವವನ್ನೇ ನಿರೂಪಿಸಿದ ವ್ಯಕ್ತಿತ್ವಗಳು ಹಲವು: ಸಾಂತಾ ಕ್ಲಾಸ್, ಶರ್ಲಾಕ್ ಹೋಮ್ಸ್, ಗಾಂಧೀಜಿ ಪ್ರತಿಮೆಗಳು, ಟಾಮ್ ಅಂಡ ಜೆರ‌್ರಿ ಮತ್ತು ನಮ್ಮ ರಾಜ್ಕುಮಾರ!!   

ಪ್ರಸಂಗ ೨:

ಮತ್ತೊಂದೆರೆಡು ವರ್ಷ ಕಾಲದ ನಂತರ ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ಸಿನೆಮ ಇತಿಹಾಸಕಾರ ಮಾಧವ್ ಪ್ರಸಾದ್ ಕನ್ನಡ ಸಿನೆಮ ಬಗ್ಗೆ, ಮೊದಲು ಸುಲಲಿತ ಇಂಗ್ಲೀಷ್ ಹಾಗೂ ನಂತರ ಅದಕ್ಕಿಂತಲೂ ನಿಗೂಢವಾದ ಕನ್ನಡದಲ್ಲಿ ಮಾತನಾಡುತ್ತಿದ್ದರು. ಸಾಂದರ್ಭಿಕವಾಗಿ ಅವರು “ಅರವತ್ತರ ದಶಕದಲ್ಲಿ ರಾಜ್ ಸಿನೆಮಗಳಿಗಿಂತಲೂ ಕಲ್ಯಾಣ್ ಕುಮಾರರ ಸಿನೆಮಗಳು ಹೆಚ್ಚು ಜನಪ್ರಿಯವಾಗಿದ್ದವು ಎಂದು ಆಗಿನ ಪತ್ರಿಕೆಗಳು ಹೇಳುತ್ತವೆ” ಎಂದಾಗ, ‘ಮಣ್ಣಿನ ದೋಣ’ ಯ ನಿರ್ದೇಶಕರು ಎದ್ದು, ಕೈ ಮುಗಿದು, ಮಾಧವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಹೇಳಿದ್ದು, “ದಯವಿಟ್ಟು ಹಾಗೆಲ್ಲ ಮಾತನಾಡಬೇಡಿ, ನಮಗೆಲ್ಲ ನೋವಾಗುತ್ತದೆ” ಎಂದರು. ಪ್ರೇಕ್ಷಕರಲ್ಲಿ ಅನೇಕರು ಇದನ್ನು ಅನುಮೋದಿಸಿದರೂ ಕೂಡ. ವಿಶೇಷವೆಂದರೆ ಯಾರೂ ಅದನ್ನು ಮತ್ತು ಅವರನ್ನು ವಿರೋಧಿಸಲಿಲ್ಲ. ಶಿಬಿರದ ನಿರ್ದೇಶಕರಾಗಿದ್ದ ಯು.ಆರ್. ಅನಂತಮೂರ್ತಿಯವರು ಪ್ರತಿಕ್ರಿಯಿಸುತ್ತ, ರಾಜಕುಮಾರರ ಬಗ್ಗೆ ಬರೆವಾಗ, ಮಾತನಾಡುವಾಗ ನಿಮ್ಮ ಸಂಶೋಧನೆಯಲ್ಲಿ ಈ ಮತ್ತು ಇಂತಹ ಪ್ರತಿಕ್ರಿಯೆ ರೂಪದ ಪ್ರತಿರೋಧವನ್ನೂ ಪರಿಗಣ ಸಬೇಕಾಗುತ್ತದೆ ಎಂದು ಮಾಧವರಿಗೆ ಸೂಚಿಸಿದರು. ಈ ಘಟನೆಯು ಸತ್ಯವನ್ನು ಕುರಿತಾದುದಲ್ಲ, ಆಯ್ಕೆ ಹಾಗೂ ಔಚಿತ್ಯದ್ದಾಗಿತ್ತು. ದಾಖಲಾಗದ ಅಭಿಮಾನದ ವಿರುದ್ಧ ದಾಖಲೆಗಳ ಸತ್ಯವನ್ನು ಘರ್ಷಣೆಗಿಳಿಸುವುದು ಸಾಕ್ರೆಟಿಸನ ನುಡಿಗಳನ್ನು ಪ್ಲಾಟೋನ ಪದಗಳಲ್ಲಿ ಮಾತ್ರ ಗ್ರಹಿಸಬೇಕಾದ ಅನಿವಾರ್ಯತೆಯಿದು, ಏಕೆಂದರೆ ದಾಖಲಾಗದ ಮಾತು ಕಳೆದುಹೋಗುವ ಸಂಸ್ಕೃತಿ ನಮ್ಮದು.

*  

ಈಗ ರಾಜ್‌ಕುಮಾರ್ ಇಲ್ಲದೆ ದಶಕ ಕಳೆದಿದೆ, ದಶಕಗಳೇ ಕಳೆದಂತಾಗಿದೆ. ಅಭಿಮಾನಿಗಳ ಒತ್ತಾಯದ ಪ್ರಕಾರವೇ ದಶಕಗಳ ಕಾಲ ಮುತ್ತುರಾಜ್ ಅವರು ತಮ್ಮ ಶರೀರ-ಶಾರೀರವನ್ನು ರೂಪಿಸಿಕೊಂಡು ಸೃಷ್ಟಿಸಿದ ವ್ಯಕ್ತಿತ್ವವೇ ‘ರಾಜ್ಕುಮಾರ್’.  ಸಾಧಾರಣವಾಗಿ ರಾಜ್ ಸ್ಥಿರಚಿತ್ರಗಳಲ್ಲಿ ಗ್ಯಾಡ್ಜೆಟ್‌ಗಳು, ಅಂದರೆ ದೂರವಾಣ , ರೇಡಿಯೋ, ಪುಸ್ತಕ ಇತ್ಯಾದಿಗಳ ಪ್ರದರ್ಶನವಿರುವುದಿಲ್ಲ. ಅವ್ಯಾವು ಇಲ್ಲದೆಯೂ ಕೇವಲ ಅವರ ಭಾವಚಿತ್ರಗಳ ಮೂಲಕವೂ ಅದು ಯಾವ ಚಿತ್ರದ ಸ್ಟಿಲ್ಲು ಎಂದು ನಿರ್ದಿಷ್ಟವಾಗಿ ಹೇಳಿಬಿಡುವ ಅಭಿಮಾನಿಗಳಿದ್ದಾರೆ. ರಾಜ್ ಎಂದರೆ ಅದು ಶರೀರ-ಶಾರೀರ ಬೆರೆತ ಒಂದು ದೃಶ್ಯಕುಲದ ಅಹ್ಲಾದಕರ ಐಚ್ಛಿಕ ಸ್ಮೃತಿ. ಬಚ್ಚನ್ ಕೇವಲ ಶಾರೀರ, ದಿಲೀಪ್ ಕುಮಾರ್ ಮೌನ, ಎನ್‌ಟಿಆರ್ ರಾಜಕಾರಣ ಹಾಗೂ ಎಂ.ಜಿ.ಆರ್ ದೈಹಿಕ ಕಸರತ್ತುಗಳ ಸ್ಮೃತಿಗಳು. ನಾವು ಸ್ಮೃತಿಗಳನ್ನು ಒತ್ತಾಯಿಸುವುದಲ್ಲದೆ, ಅದರ ರೂಪುರೇಷೆ ಹೇಗಿರಬೇಕೆಂದೂ, ನಮ್ಮ ಕುಲದ ಸಾಮೂಹಿಕ ಅನುಭವದ ಕಾಲ್ಪನಿಕ ವ್ಯಕ್ತಿತ್ವವೊಂದನ್ನು ಅದು ಹೇಗಿರಬೇಕೆಂಬ ರೂಪುರೇಷೆಯನ್ನು ಬಯಸುತ್ತೇವೆ, ಪಡೆಯುತ್ತೇವೆ ಹಾಗೂ ಉಳಿಸಿಕೊಳ್ಳುತ್ತೇವೆ. ರಾಜ್ ಬದುಕಿರುವವರೆಗೂ ಅಂತಹ ಒಂದು ಬೃಹತ್ ವ್ಯಕ್ತಿತ್ವವನ್ನು ಬಯಸಿ, ಪಡೆದಿದ್ದೆವು. ಈಗ ರಾಜ್ ಕರ್ತೃ ಮುತ್ತುರಾಜ್ ಇಲ್ಲದಾದ ಮೇಲೆ ಹೇಗೆ ಅದನ್ನು ಉಳಿಸಿಕೊಂಡಿದ್ದೇವೆ ಎಂಬುದೇ ಕುತೂಹಲಕರ.

ಅಮೃತಶಿಲೆಯ ರಾಜ್ ಭಾವಶಿಲ್ಪದಲ್ಲಿ ತಲೆಗೂದಲು ಹಾಗೂ ಮೀಸೆಗೆ ಕಪ್ಪುಬಣ್ಣ ಬಳಿದಿದ್ದಿದೆ. ಶಿವಕುಮಾರ್ ಎಂಬ ಶಿಲ್ಪಿ ಪಂಚಲೋಹದಲ್ಲಿ ಕೃಷ್ಣದೇವರಾಯನ ಅವತಾರದಲ್ಲಿ ರಾಜ್ಕುಮಾರರನ್ನು ನಿರೂಪಿಸಿದ್ದಿದೆ. ಆಟೋಗಳ ಹಿಂದೆ ಸಾಬಣ್ಣ ಬರೆದ, ಬೆನ್ನ ಮೇಲೆ ಪಾರಿವಾಳ ಹೊತ್ತ ಕಸ್ತೂರಿ ನಿವಾಸದ ಪ್ಲಾಸ್ಟಿಕ್ ಅನುಭವದ ರಾಜ್ ಇದ್ದಾರೆ. ಅನಾಮಿಕರು ಅಣ್ಣಾವ್ರೊಂದಿಗೆ ತೆಗೆಸಿಕೊಂಡ ಗುಂಪು ಚಿತ್ರಗಳು ಡಿಜಿಟಲ್ ಅವತಾರದಲ್ಲಿ ಫೇಸ್‌ಬುಕ್ ತುಂಬ ರಾರಾಜಿಸುತ್ತಿವೆ. ಎಲ್ಲ ಕನ್ನಡ ಹಾಡುಗಳನ್ನು ಬದಿಗೆ ಸರಿಸಿ, “ಈಫ್ ಯು ಕಮ್ ಟುಡೆ” ಎಂಬ ಜೇಮ್ಸ್ ಬಾಂಡ್ ಅವತಾರದ ರಾಜ್ ಬಗ್ಗೆ ಯೂಟ್ಯೂಬ್ ತುಂಬ ಅಭಿಮಾನದ ಪೂರವೂ, ವಿರೋಧದ ಸಿನಿಕ ವಿಶ್ಲೇಷಣೆಗಳೂ ಇದ್ದಾವೆ. ಸಮಗ್ರವಾಗಿ ಹೇಳುವುದಾದರೆ, ಗಂಭೀರ ಶೈಕ್ಷಣ ಕ ಅಧ್ಯಯನದಲ್ಲಿ ಮುಗ್ಧಾಭಿಮಾನದ ಸರಳ ಹೊಗಳಿಕೆಯ ರಾಜಕುಮಾರನಿದ್ದರೆ, ಅದರ ಹೊರಗಿನ ಜನಸಾಮಾನ್ಯರ ನಡುವಣ ಅಣ್ಣಾವೇ ಹೆಚ್ಚು ವರ್ಣಮಯವಾಗಿ ನಮ್ಮ ನಡುವೆ ಉಳಿದುಕೊಂಡುಬಿಟ್ಟಿದ್ದಾರೆ.

*

‘ಬೈಪೋಲಾರ್ ಐಡೆಂಟಿಟೀಸ್’ ಎಂಬ ಕನ್ನಡ ಸಿನೆಮವನ್ನು ಕುರಿತಾದ ಇಂಗ್ಲೀಷ್ ಪುಸ್ತಕದಲ್ಲಿ ಲೇಖಕ ಎಂ.ಕೆ.ರಾಘವೇಂದ್ರ ಅಣ್ಣಾವ್ರ ‘ರಾಜಕುಮಾರ’ನಾಗಿ ನಮ್ಮ ನಡುವೆ ಉಳಿದುಕೊಂಡಿರುವ ಬಗ್ಗೆ ಸೂಕ್ಷ್ಮ ಹಾಗೂ ಅರ್ಥಪೂರ್ಣ ಹೋಲಿಕೆಯೊಂದನ್ನು ನೀಡಿದ್ದಾರೆ. “ರಾಜ್‌ಕುಮಾರ್ ಮೈಸೂರು ಪ್ರಾಂತ್ಯದ ಬ್ರಾಹ್ಮಣರ ಹುಡುಗನಾಗಿಯೇ ಎಲ್ಲೆಡೆ ಪ್ರಕಟಗೊಳ್ಳುವುದು” ಎಂಬ ಅರ್ಥಕ್ಕೆ ಅತ್ಯಂತ ಹತ್ತಿರವಾಗಿ ಭಾವಿಸುತ್ತಾರಿವರು. ಮುತ್ತುರಾಜ್ ಬ್ರಾಹ್ಮಣರಾಗಿದ್ದಿದ್ದಲ್ಲಿ ಕನ್ನಡ ಸಿನೆಮವೇ ವಿಭಿನ್ನವಾಗಿರುತ್ತಿತ್ತೇನೋ, ಅವರಿಗೆ ಸಿಕ್ಕ ಅಥವ ಸಿಗದೇ ಹೋದ ಮನ್ನಣೆಗಳು ವಿಭಿನ್ನವಾಗಿರುತ್ತಿದ್ದವೇನೋ ಎಂದು ಶಾಬ್ದಿಕ-ಇತಿಹಾಸಕಾರ ಬಿ.ಗಣಪತಿ ರೇಡಿಯೋದಲ್ಲಿ ನುಡಿದದ್ದಿದೆ. ಸತ್ಯ ಇವೆರಡರ ನಡುವೆ ಎಲ್ಲಿಯೋ, ಆದರೆ ಖಂಡಿತವಾಗಿಯೂ ಸಿಲುಕಿಕೊಂಡಿದೆ. ಶೆಟ್ಟರಿಗೆ ಶೆಟ್ಟರಂತೆ, ಗೌಡರಿಗೆ ಗೌಡರ ಹುಡುಗನಂತೆ ಭಾಸವಾಗುತ್ತಿದ್ದ ರಾಜ್ಕುಮಾರ, ಲಿಂಗಾಯಿತರಿಗೆ ಅಯ್ಯಂಗಾರಿಯಾಗಿ, ಶೂದ್ರನಿಗೆ ಮೇಲ್ಜಾತಿಯವನಾಗಿ ಅನಿಸಿದೆ, ನಮ್ಮ ಮನೆಯವನೇ ಆಗಿದ್ದರು ಎಂದು ರಾಘವೇಂದ್ರರ ಸೂಚನೆ ಇರಬಹುದೆ?

ಯಾರೀ ರಾಜಕುಮಾರ? ಯಾವುದೇ ಒಂದು ಜಾತಿ, ವರ್ಗ, ಅಂತಸ್ತು, ರಾಜಕೀಯ ಒಲವುಗಳಿಗೆ ಸಿಕ್ಕಿಕೊಳ್ಳದ ಮುಖವದಾಗಿತ್ತು, ಆಗಿ ಉಳಿದುಕೊಂಡಿದೆ ಕೂಡ. ಬಹಳ ಹಿಂದೆಯೇ ಇದನ್ನರಿತಂತೆ, “ನಿನ್ನ ಮುಖ ಕಂಡ ಜನ ಹಿಗ್ಗಿ ನೂತನ” ಎಂದು ಲೀಲಾವತಿ ಹಾಡುವ ಸಾಲನ್ನು ಬರೆದವರಿಗೆ ಇದು ತಿಳಿದಿತ್ತು ಎಂದು ಕಾಣುತ್ತದೆ. ಇದರರ್ಥವೇನೆಂದರೆ, ರಾಜ್‌ಕುಮಾರ್ ನಮ್ಮನ್ನು ಯಾವುದೇ ರೀತಿಯಲ್ಲೂ ಪ್ರತಿನಿಧಿಸಲಿಲ್ಲ. ಬದಲಿಗೆ, ಭಾರತ ಸ್ವಾತಂತ್ರ್ಯಗೊಂಡ ದಶಕವೊಂದರಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ, ನಮಗೆ ಬೇಕಾದಂತೆ ಬಾಗಿಸಿಕೊಳ್ಳಬಲ್ಲ ಮೇಣದಬೊಂಬೆಯಾಗಿ ದಕ್ಕಿ, ಕರ್ನಾಟಕದ ಸಮಾಜ, ಸಂಸ್ಕೃತಿಯೊಂದರ ಒಂದು ಆದರ್ಶಮಯ ಇರುವಿಕೆಗೆ ತಕ್ಕಂತೆ ಬಾಗಿ

ಬಳುಕಿದ ವ್ಯಕ್ತಿತ್ವವೇ ರಾಜ್‌ಕುಮಾರ್. ಮೂರು ದಶಕಗಳ ಬಳಿಕವಷ್ಟೇ ಇದನ್ನು ನಾವು ಕನ್ನಡಕ್ಕೆ ಸೀಮಿತಗೊಳಿಸಿಬಿಟ್ಟೆವೆಯೇ ಎಂಬ ಅನುಮಾನ ಈಗ ಕಾಡತೊಡಗಿದೆ.    

*

ವಾಲ್ಟರ್ ಬೆಂಜಮಿನನ ವಾದವೊಂದಿದೆ. ಅಸಲಿಯಾದ ಪರಿಕಲ್ಪನೆಯೊಂದನ್ನು ನಕಲು ಮಾಡುತ್ತಾ ಹೋದಷ್ಟೂ ಅಸಲಿಯ ಪ್ರಭೆ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ ಎಂದು. ರಾಜಕುಮಾರ್ ಏಳೆಂಟು ವಯಸ್ಸಿನವರಾಗಿದ್ದಾಗ ಬರೆದ ಲೇಖನವಿದು (೧೯೩೬). ಅದಕ್ಕಿಂತಲೂ ಡಿಜಿಟಲ್ ಯುಗಕ್ಕೆ ಮುನ್ನ ಛಾಯಾಚಿತ್ರಗಳ ಸಿದ್ಧಾಂತವನ್ನಿರಿಸಿಕೊಂಡು ಬರೆದದ್ದು. ಆ ಪ್ರಭೆಯಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಪ್ರಭೆಗಳೆಂಬುದಿರುತ್ತವೆ. ಆದರೆ ರಾಜ್ ಪ್ರತಿಭೆಯು ಛಾಯಾಚಿತ್ರ ಹಾಗೂ ಡಿಜಿಟಲ್ ಯುಗದ ನಡುವಿನ ಸ್ಥಿತ್ಯಂತರವಾಗಿ ವಸಾಹುತೋತ್ತರ ಪ್ರತಿಭೆಯಾಗಿ ಮೂಡಿಬಂದಂತಹದ್ದು. ಪ್ರತಿಕೃತಿಯೇ ಅಸಲಿಯಾಗುವ, ಸಿಮ್ಯುಲೇಷನ್ ಎಂದು ಕರೆವ ಸ್ಥಿತಿಯದು. ಮೇಲ್‌ವರ್ಗದವರಿಗೆ ಮೇಲುವರ್ಗದವರಾಗಿ, ಶೂದ್ರರಿಗೆ ಶೂದ್ರರಾಗಿ ರಾಜಕುಮಾರ ಗೋಚರಿಸುವ ಬಗೆಯನ್ನೇ ಸಿಮ್ಯು ಈಗ ರಾಜ್ ಸಿನೆಮಗಳು ಬಿಡುಗಡೆ ಅಥವ ಮರುಬಿಡುಗಡೆಯಾಗುವ ಸಂಪ್ರದಾಯ ಇನ್ನೂ ಹುಟ್ಟಿಲ್ಲ. ಆದರೆ ಆನ್‌ಲೈನಿನಲ್ಲಿ ಬೇಕಾದಾಗ, ಬೇಕಾದಂತೆ, ಬೇಕಾದಷ್ಟು ರಾಜ್‌ರ ಸಿನೆಮಗಳನ್ನು ನೋಡಬಹುದಾಗಿದೆ. ಆದರೆ ಹೆಚ್ಚು ವೀಕ್ಷಕರಿರುವುದು ಮುತ್ತುರಾಜ್ ನಿಜಜೀವನದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ, ತನ್ನ ಮನದಾಳದ ಮಾತುಗಳನ್ನಾಡುತ್ತಿರುವ ವಿಡಿಯೋಗಳಿಗೆ.

ಇಂದು ರಾಜಕುಮಾರ್ ಎಂದಿಗಿಂತಲೂ ಪ್ರಖರವಾಗಿ ಹೊಳೆಯುತ್ತಿರುವುದಕ್ಕೆ ಕಾರಣ, ಅವರ ನಂತರದ ಅವರ ರಂಗದ ಜನಪ್ರಿಯ ಆಯಾಮದ ಇಳಿಜಾರಿರಬಹುದು, ಅಥವ ಅಂತಹ ನೆಹರೂವಿಯನ್ ತಾರಾಮೌಲ್ಯದ ದಿನಗಳ ಅಂತ್ಯವೂ ಇರಬಹುದು. ಇನ್ನು ತಾರೆಗಳಿಲ್ಲದ, ರಾತ್ರಿ ನಿದ್ರಿಸದ ಜನರ ಯುಗವಿದು. ಐತಿಹಾಸಿಕವಾಗಿ ನಾವು ಮರೆಯಲಿಚ್ಛಿಸುವವರಿಗಿಂತಲೂ ಸ್ಮರಿಸಲಿಚ್ಛಿಸುವವರ ಪಟ್ಟಿ ಚಿಕ್ಕದೇ. ಅದರಲ್ಲಿ ವರ್ಗ ಪಂಗಡಗಳ ಚಿತಾವಣೆಯ ಸುಪರ್ದಿಯೊಳಗೆ ಅರ್ಧಕ್ಕಿಂತಲೂ ಹೆಚ್ಚು ಎಲ್ಲ ರಂಗದ (ಧರ್ಮ, ರಾಜಕಾರಣ ಇತ್ಯಾದಿ) ತಾರೆಯರು ಹುದುಗಿಹೋಗುತ್ತಾರೆ. ಗಾಂಧಿ ತಾತ, ಗಣಪರಂಗಹ ಕೆಲವರು ಮಾತ್ರ ವ್ಯಂಗ್ಯಚಿತ್ರಕ್ಕೂ ಯೋಗ್ಯರಾಗುವ ಪ್ರಜಾಪ್ರಭುತ್ವವಾದಿ ಉತ್ತುಂಗ ಸ್ಥಿತಿ ತಲುಪಿಬಿಡುತ್ತಾರೆ. ರಾಜ್ ಈ ಶ್ರೇಣ ೀಕರಣದಲ್ಲಿ ಈಗ ಎಲ್ಲಿ ನಿಲ್ಲುತ್ತಾರೆ?   

೨೦ನೇ ಏಪ್ರಿಲ್ ೨೦೧೬ ಪ್ರಕಟಿಸಲಾಗಿದೆ