-ಎಚ್. ಎ. ಅನಿಲ್ ಕುಮಾರ್
ಎಲ್ಲೆಡೆ ಇರುವಂತೆ ಕರ್ನಾಟಕದಲ್ಲಿ ಕಲಾಶಿಕ್ಷಕರು ಗಂಭೀರ ಕಲಾವಿದರಾಗಿರುವುದು ಅಪರೂಪ. ಮುಖ್ಯವಾಹಿನಿ ಕಲಾವಿದರು ಶಿಕ್ಷಕರಾಗಿರುವುದೂ ಅಷ್ಟೇ ಅಲಭ್ಯ. ಶಿಕ್ಷಣದಲ್ಲಿರುವ ಸಮಸ್ಯೆಗಳನ್ನೇ ತಮ್ಮ ಕಲಾಭಿವ್ಯಕ್ತಿಯ ವಿಷಯಗಳನ್ನಾಗಿಸಿಕೊಂಡ ಕಲಾವಿದರಂತೂ ಇನ್ನೂ ಅಪರೂಪ. ಆ ಸಮಸ್ಯೆಗಳಿಗೆ ತಮ್ಮದೇ ಆದ ಪರಿಹಾರವನ್ನು ಕಲಾತ್ಮಕವಾಗಿ ರೂಪಿಸಿಕೊಡುವುದನ್ನೆ ಸ್ಥಾಯಿಯಾಗಿಸಿಕೊಂಡವರು ನಭೂತೋ ಎಂಬಂತಿರುವವರು ಮಾತ್ರ. ಈ ನಿಟ್ಟಿನಿಂದ ನಾಲ್ಕು ದಶಕಗಳಿಂದ ಅಪ್ರಜ್ಞಾಪೂರ್ವಕವಾಗಿಯಾದರೂ ಶೈಕ್ಷಣ ಕ ವಿಷಯಗಳನ್ನು ತಮ್ಮ ಕೃತಿರಚನೆಯಲ್ಲಿ ಅನಿವಾರ್ಯವಾಗಿಸಿಕೊಂಡಿರುವ ಕಲಾವಿದ-ಶಿಕ್ಷಕ ನಾಡೋಜ ಜೆ.ಎಸ್.ಖಂಡೇರಾವ್.
‘ಚಿತ್ರಸಂತೆ’ಯಂತಹ ಕೃತಿಸಮೂಹದ ಕ್ಲೀಷೆಯ ನಡುವೆಯೂ ಹೀಗೆ ಮಾಡಲು ಕಲಾವಿದರಿಗೆ ಅಪಾರವಾದ ನೈತಿಕ ಸ್ಥೈರ್ಯ ಇರಬೇಕಾಗುತ್ತದೆ. ಅಷ್ಟೇ ಅಲ್ಲದೆ, ಕಲಾಶಿಕ್ಷಣವೇ ಜೀವರಹಿತವಾಗುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಪರಿಹಾರವಾಗಿ ಪಠ್ಯಕ್ರಮ, ಬೋಧನೆ ಇತ್ಯಾದಿಗಳ ಪುನರುತ್ಥಾನದಿಂದಾಚೆಗೂ, ಕಲಾಕೃತಿಗಳ ಮೂಲಕವೂ ಬಗೆಹರಿಸಬಹುದಾಗಿದೆ ಎಂದು ನಿರೂಪಿಸಿರುವುದು ಇವರ ಕೃತಿಗಳ ಹಿರಿಮೆ. ಈ ಪ್ರತಿಭೆಯನ್ನೇ ಗುರ್ತಿಸಿದಂತೆ ಇದೀಗ ಬೆಂಗಳೂರಿನ ಆಧುನಿಕ ಕಲೆಗಳ ರಾಷ್ಟ್ರೀಯ ಸಂಗ್ರಹಾಲಯವು (ಎನ್.ಜಿ.ಎಂ.ಎ) ಇವರ ಜೀವಮಾನದ ಆತ್ಯುತ್ತಮ ಕೃತಿಗಳ ಪ್ರದರ್ಶನವನ್ನು ರೆಟ್ರೊಸ್ಪೆಕ್ಟ್ ರೂಪದಲ್ಲಿ ಇದೇ ನವೆಂಬರ್ ೨೩ನೇ ತಾರೀಕಿನಿಂದ ಒಂದು ತಿಂಗಳ ಕಾಲ ಪ್ರದರ್ಶಿಸಲಿದೆ. ವಿಶೇಷವೆಂದರೆ, ಸ್ವತಃ ಖಂಡೇರಾವ್ ಅವರ ಕೃತಿಗಳ್ಯಾವುವೂ ಎನ್.ಜಿ.ಎಂ.ಎಯ ನಿಶ್ಚಿತ ಸಂಗ್ರಹದಲ್ಲಿಲ್ಲದಿರುವುದು! ಅಂದರೆ ಪ್ರಸ್ತುತ ಅವರಿಗೆ ದೊರಕಿರುವ ಮಾನ್ಯತೆಯು ಅವರ ಕಲಾಪ್ರತಿಭೆಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡಿದೆ ಎಂಬುದಕ್ಕೆ ಇದಕ್ಕಿಂತಲೂ ಬೇರೆ ಸಾಕ್ಶಿ ಬೇಕಿಲ್ಲವೇನೋ.
*
ಕೃತಿ, ನಂಬಿಕೆ ಹಾಗೂ ಆಚರಣೆಯ ಶಿಸ್ತನ್ನು ಮುಂಬಯಿಯ ಜೆ.ಜೆ.ಕಲಾಶಾಲೆಯ ನೈಜತೆಯಲ್ಲಿ ಕಲಿತು ನುರಿತ ಇವರು ಅದೇ ವಿಶ್ವಾಸದಿಂದ ಗುಲಬರ್ಗದ ಐಡಿಯಲ್ ಫೈನ್ ಆರ್ಟ್ಸ್ ಸೊಸೈಟಿಯನ್ನು ಆರಂಭಿಸಿದವರು (೧೯೬೫). ಆಗೆಲ್ಲ ಕಲಾಶಿಕ್ಷಕರಾಗಬೇಕೆಂದು ಬಯಸಿದ ಕರ್ನಾಟಕದ ಕಲಾವಿದರುಗಳು ಸ್ವತಃ ತಮ್ಮದೇ ಕಲಾಶಾಲೆಗಳನ್ನೇ ಆರಂಭಿಸಿದ ಉದಾಹರಣೆಗಳಿವೆ. ಈಗಿನ ಸ್ಟಾರ್ಟ್-ಅಪ್‌ಗಳಿದ್ದಂತೆ ಅವು. ನಂಜುಂಡರಾಯರ ಚಿತ್ರಕಲಾ ಪರಿಷತ್ತು, ಹಡಪದರ ಕೆನ್ ಕಲಾಶಾಲೆ ಹೀಗೆಯೇ ಆರಂಭಗೊಂಡದ್ದು. ಶಾಲೆಯನ್ನು ನಡೆಸಲೊಲ್ಲದ ಖಂಡೇರಾವ್ ಮಾತ್ರ ಅದನ್ನು ತೊರೆದು ಸಿದ್ದಲಿಂಗೇಶ್ವರ ಕಲಾಶಾಲೆಯಲ್ಲಿ ೧೯೯೮ರಲಿ ನಿವೃತ್ತರಾಗುವವರೆಗೂ ಶಿಕ್ಷಕರಾಗಿಯೇ, ಕಲಾವಿದರಾಗಿಯೂ ಉಳಿದುಕೊಳ್ಳುವ ದ್ವಿಪಾತ್ರಾಭಿನಯ ಮಾಡಿದ್ದರು. ನಂಜುಂಡರಾವ್ ವಿಫುಲವಾದ ಕಲಾಕೃತಿಗಳನ್ನು ಮೊತ್ತವೊಂದನ್ನು ಸೃಷ್ಟಿಸಲಾಗಲಿಲ್ಲ, ಹಡಪದರ ಕೃತಿಗಳು ಸೃಷ್ಟಿಗೊಂಡರೂ ಸಾರ್ವಜನಿಕರಿಗೆ ದಕ್ಕಲಿಲ್ಲ. ನಿಜವಾದ ಕಲಾಶಿಕ್ಷಣ ಇರುವುದು ಸಂಸ್ಥೆಯಲ್ಲೋ ಅಥವ ತೊಡಗಿಸಿಕೊಳ್ಳುವಿಕೆಯಲ್ಲಿಯೋ ಎಂಬ ಬಹುಮುಖ್ಯ ತಾತ್ವಿಕ ಪ್ರಶ್ನೆಗೆ ಖಂಡೇರಾವ್ ಅವರ ಕೃತಿಗಳು ಪರಿಹಾರ ಸೂಚಿಸುತ್ತಲೇ ಇರುತ್ತವೆ.
ಪಾಠ ಹೇಳುತ್ತ, ನಿಸರ್ಗಚಿತ್ರ, ಭಾವಚಿತ್ರಗಳನ್ನು ಸ್ವಯಂ-ಪೋಷಿತ ಅನಿವಾರ್ಯತೆಯಿಂದ ರಚಿಸುತ್ತಿದ್ದ ಇವರು ರೂಢಿಗತ ಕಣ ್ಣಗೆ ಒಬ್ಬ ಸಾಮಾನ್ಯ ಶಿಕ್ಷಕರಂತೆ ಕಂಡಿರಬಹುದು. ಸಾಮಾಜಿಕ ಚಳುವಳಿಗಳಲ್ಲಿ ಭಾಗವಹಿಸಲೊಲ್ಲದೆಯೂ, ಹೆಚ್ಚು ವಾಚಾಳಿಯಲ್ಲದ್ದರಿಂದಲೋ ಏನೋ ಕಲಾಕೃತಿಗಳ ಮೂಲಕವೇ, ಏಕಾಂಗಿತನದಿಂದಲೇ ಅಂತಹ ಶೈಕ್ಷಣ ಕ ಉನ್ನತಿ ಅಥವ ವೈಯಕ್ತಿಕ ದೃಶ್ಯಚಳುವಳಿಯೊಂದನ್ನು ಸಾಧಿಸಿದ್ದು ಇವರ ಅಪ್ರಜ್ಞ ಸಾಧನೆ ಎನ್ನಬಹುದು. ಸಾಧಾರಣವಾಗಿ ಶಿಕ್ಷಕರು ಅಪರೂಪಕ್ಕೆ ಗಂಭೀರ ಚಿತ್ರರಚನೆ ಮಾಡುವಾಗ ಅವುಗಳಲ್ಲಿ ಶೈಕ್ಷಣ ಕ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಡಿಬಿಡುತ್ತಾರೆ. ಕರ್ನಾಟಕದ ಕಲಾಶಾಲೆಗಳಲ್ಲಿ ಸುಮಾರು ಒಂದು ಶತಮಾನ ಕಾಲ ಪ್ರಸ್ತುತವಿರುವ ಒಂದು ಕಂತಿನ ಸಮಸ್ಯೆಯನ್ನೇ ಪರಿಗಣ ಸಿ: ಸ್ಟಿಲ್ ಲೈಫ್ ಮತ್ತು ಭಾವಚಿತ್ರ ರಚನೆ ಕಲಿತ ನಂತರ ವಿದ್ಯಾರ್ಥಿಗಳು ತಮ್ಮ ಸ್ವಂತ ಸೃಜನಶೀಲ ಅಭಿವ್ಯಕ್ತಿಯ ಕೃತಿಯಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು? ಅದು ಅನಿವಾರ್ಯವಲ್ಲದಿದ್ದರೆ ಮುಂಚಿನ ಎರಡೂ ಭಿನ್ನ ಪ್ರಕಾರಗಳ ಚಿತ್ರರಚನೆಯ ಅಗತ್ಯವೇನು? ನಿಸರ್ಗಚಿತ್ರಣವನ್ನು ‘ಶೈಕ್ಷಣ ಕ ಪ್ರವಾಸದ ಫಲವಷ್ಟೇ’ ಎಂಬ ವರ್ಗೀಕರಣದಿಂದಾಗಿ ಕಲಾಶಾಲೆಯ ಆವರಣದಿಂದ ಹೊರಗೆ ಏಕೆ ಇರಿಸಲಾಗಿದೆ? ಅಮೂರ್ತ ಕೃತಿಯನ್ನು ಪೂರ್ಣವಾಗಿ ಅಮಾನ್ಯವನ್ನಾಗಿಸಲಾಗಿರುವುದು ಏಕೆ? ಖಂಡೇರಾವ್ ಅವರ ಪ್ರಸ್ತುತ ಪ್ರದರ್ಶನದ ಕರಡು ಚಿತ್ರಗಳು, ರೇಖಾಚಿತ್ರಗಳು, ಜಲವರ್ಣ ನಿಸರ್ಗಕೃತಿ, ಭಾವಚಿತ್ರಣ ಹಾಗೂ ಬೃಹತ್ ಅಮೂರ್ತ ಕೃತಿಗಳು ಈ ಎಲ್ಲ ಕರ್ನಾಟಕ-ನಿರ್ದಿಷ್ಟ ಶೈಕ್ಷಣ ಕ ತುಮುಲದ, ಪ್ರಶ್ನೆಗಳಿಗೆ ಪರಿಹಾರಾತ್ಮಕ ಅಭಿವ್ಯಕ್ತಿ ರೂಪವಾಗಿ ಕಂಡುಬರುತ್ತವೆ/ತ್ತಿವೆ.
*
ಸ್ಟುಡಿಯೊ ಒಳಗೆ ಕುಳಿತು ಪ್ಯಾಲೆಟ್ ಹಿಡಿದು ರೊಮ್ಯಾಂಟಿಕ್ ಆಗಿ ಚಿತ್ರ ರಚಿಸುವುದು ಒಂದು ಕ್ಲೀಷೆ. ಖಂಡೇರಾವ್ ದಂತಗೋಪುರದಲ್ಲಿ ಕುಳಿತು ಪ್ರತಿಭೆಯ ಬಡತನವನ್ನು ದೃಶ್ಯವನ್ನಾಗಿಸಿದವರಲ್ಲ. ಕಂಡುಕೇಳಿಲ್ಲದ ಊರುಕೇರಿಗಳನ್ನು ವಿದ್ಯಾರ್ಥಿಗಳೊಂದಿಗೆ ವೀಕ್ಷಿಸಿ, ಸ್ಟುಡಿಯೋಗೆ ತೆರಳಿ ಕಂಡದ್ದನ್ನು ಬದಿಗಿರಿಸಿ, ಅದರ ‘ಸ್ಮೃತಿಯನ್ನು’ ಮಾತ್ರ ಕರಡು ರೇಖಾಚಿತ್ರಗಳನ್ನಾಗಿಸುತ್ತ ಬಂದಿದ್ದಾರೆ. ಐತಿಹಾಸಿಕ ಜನಪ್ರಿಯ ತಾಣಗಳಲ್ಲಿ ಸ್ಥಳದಲ್ಲೇ ಜಲವರ್ಣ ಚಿತ್ರಗಳನ್ನು ರಚಿಸುವಾಗಲೂ ಸಹ, ಆ ಜಾಗದ ಸ್ಥಳ ಮಹಿಮೆಗಳನ್ನು ತೆರವುಗೊಳಿಸಿ, ನೋಟವನ್ನು ಸಾಧಾರಣಗೊಳಿಸಿಬಿಡುತ್ತಾರೆ ಇವರು, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬಂತೆ. ಆದ್ದರಿಂದ ಜಲವರ್ಣ ಚಿತ್ರಗಳು ಆಕರ್ಷಕ ದೃಶ್ಯವಾಗಲು ಉದ್ದೇಶಪೂರ್ವಕವಾಗಿ ನಿರಾಕರಿಸುವುದೇ ಇವರ ಕೃತಿಗಳ ಆಕರ್ಷಣೆ. ಅದಾಗಲೇ ಸುವರ್ಣ ಚೌಕಟ್ಟು ತೊಟ್ಟಿಕೊಂಡಿರುವ ದೃಶ್ಯವನ್ನು ಸಾಧಾರಣ ಚಿತ್ರವಾಗಿಸುವುದು ಖಂಡೇರಾವ್ ಅವರ ದೃಶ್ಯರಾಜಕಾರಣದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಒಳ್ಳೆಯ ಕೃತಿಯಾಗಲು ಆಕರ್ಷಕವಾಗಿರಬೇಕೆಂಬ ರೂಢಿಯನ್ನು ಇವರ ಚಿತ್ರಗಳು ಮುರಿಯುತ್ತವೆ. ಸಂಜೆಮುಂಜಾನೆಯ ನಾಟಕೀಯ ಬಿಸಿಲಿನ ದೃಶ್ಯಗಳ ಬದಲು, ಉತ್ತರ ಕರ್ನಾಟಕದ ನಡುಮಧ್ಯಾಹ್ನದ ಬಿಸಿಲು, ಬಿಸಿಲ ಮಳೆ, ಜನರಹಿತ ಒಣವಾತಾವರಣ ಇತ್ಯಾದಿಗಳ ಅಪರೂಪದ ಅನುಭವ ಇವರ ಚಿತ್ರಗಳಲ್ಲಿವೆ. ಕ್ಯೂಬಿಸ್ಟ್ ಕಲಾವಿದರಂತೆ, ಹಂಪಿಯ ದೃಶ್ಯವನ್ನು ಪಾಳು ಬಿದ್ದಂತೆ ತೋರಿಸುವ ಮೂಲಕ ಅಲ್ಲಿನ ಬಿಸಿಲ ನೈಜತೆಯನ್ನು ಚಿತ್ರಿಸುತ್ತಾರೆಯೇ ಹೊರತು, ಪ್ರವಾಸೋಧ್ಯಮದ ಆರ್ಥಿಕ ರಾಜಕಾರಣದಿಂದ ಅದೇ ಜಾಗಗಳ ಕುರಿತು ಬ್ರೋಶರ್, ಸಾಮಾಜಿಕ ಜಾಲಗಳಲ್ಲಿ ತೇಲಿಬಿಡಲಾಗುವ ಸಿಹಿಸಿಹಿ ಚಿತ್ರಗಳನ್ನಲ್ಲ. ಸರ್ಕಾರವು ವಿರೋಚಿತ ಮರಣವನ್ನಪ್ಪಿದಂತೆ ಭಿತ್ತರಿಸಿದ ಐತಿಹಾಸಿಕ ತಾಣಗಳನ್ನು ಇವರು ಪಾಳು ಬಿದ್ದಂತೆ ತೋರಿಸಿರುವುದನ್ನು ಯಾರೂ ಅಷ್ಟಾಗಿ ಗಮನಿಸಿದಂತಿಲ್ಲ. ಆದ್ದರಿಂದಲೇ ಸರ್ಕಾರವು ಅತ್ಯುತ್ತಮ ಕಲಾವಿದರಿಗೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ, ವೆಂಕಟಪ್ಪ ಪ್ರಶಸ್ತಿ, ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಸ್ಥಾನ, ಇವೆಲ್ಲವನ್ನೂ ಸಲ್ಲಿಸಿಯಾಗಿದೆ.
*
ನಾಟಕೀಯತೆ ಹಾಗೂ ಮೆಲೋಡ್ರಾಮಾಗಳು ಕಡಿಮೆ ಇರುವ ಇವರ ಕೃತಿಗಳು ಫ್ರೆಂಚ್-ರಿಯಲಿಸ್ಟ್ ಸಿನೆಮಗಳಿದ್ದಂತೆ. ಯೋಗಾನುಯೋಗವೆಂಬಂತೆ, ಅದೇ ೧೯ನೇ ಶತಮಾನದ ಫ್ರಾನ್ಸಿನ ಪ್ರಮುಖ ಚಿತ್ರಕಲಾ ಶೋಧನೆಯಾದ ಇಂಪ್ರೆಷನಿಸ್ಟ್ ತಂತ್ರವನ್ನು ಸಮಕಾಲೀನವಾಗಿ ಪರಿಣಾಮಕಾರಿಯಾಗಿ ದುಡಿಸಿಕೊಂಡಿದ್ದಾರೆ ಈ ಕಲಾವಿದ: ಜಲವರ್ಣ ಹಾಗೂ ಭಾವಚಿತ್ರಗಳಲ್ಲಿ. ಖಂಡೇರಾವ್ ಅವರ ಭಾವಚಿತ್ರಗಳು ಬಹುವಾಗಿ ಪ್ರಾತ್ಯಕ್ಷಿಕೆಗಳು ಅಥವ ಹೇಳಿ ಬರೆಸಲಾಗಿರುವಂತಹವು (ಕಮೀಷನ್ಡ್). ಕಲಾಶಿಕ್ಷಕರೆಲ್ಲರಿಗೂ ಅನಿವಾರ್ಯವಾಗಿರುವ ಚಿತ್ರಣ ಕ್ರಮವೇ ಪ್ರಾತ್ಯಕ್ಷಿಕೆ (ಡೆಮಾನ್ಸ್‌ಟ್ರೇಷನ್). ಸೂಕ್ತ ಅನಾಮಿಕರೊಬ್ಬರನ್ನು ಎದುರಿಗಿರಿಸಿ ಅವರನ್ನು ನೆಪವನ್ನಾಗಿಸಿಕೊಂಡು ತಮ್ಮ ಚಿತ್ರಣ ಸಾಮರ್ಥ್ಯವನ್ನು ವ್ಯಕ್ತಪಡಿಸುವ ಕಲೆ ಇದು. ಸಾಮರ್ಥ್ಯದ ಬದಲು ಉದ್ದೇಶವನ್ನು ತಮ್ಮ ಭಾವಚಿತ್ರಗಳಲ್ಲಿ ಈ ಕಲಾವಿದ ಮೂಡಿಸಿದ್ದಾರೆ. ನಿಸರ್ಗ ಚಿತ್ರಗಳಲ್ಲಿ, ಆಯಾ ಐತಿಹಾಸಿಕ ಸ್ಮಾರಕಗಳ ಜನಪ್ರಿಯತೆಯ ಗೌರವದ ಅಹಮನ್ನು ಹೇಗೆ ನಿರ್ದಿಷ್ಟ ಒಣಚಿತ್ರಣದ ಮೂಲಕ ಮುರಿದಿದ್ದಾರೋ ಹಾಗೆಯೆ ಭಾವಚಿತ್ರಗಳ ವ್ಯಕ್ತಿಗತ ಮುಖಲಕ್ಷಣಗಳ ಮೇಲೆ ನಿಸರ್ಗದ ಸಮೀಪ ವಿವರಗಳನ್ನು (ಕ್ಲೋಸಪ್) ಬಿಡಿಸುತ್ತಾರೆ. ನಿಸರ್ಗ ಮತ್ತು ಮುಖಭಾವಗಳು ಇವರಿಗೆ ಒಂದು ತಾತ್ವಿಕ ಘರ್ಷಣೆಯ ನೆಲೆಯಷ್ಟೇ. ಪ್ರಚುರಪಡಿಸಲಾಗಿರುವ ತಾಣದಿಂದ ಜನಪ್ರಿಯತೆಯ ಒಡೆದು, ಅನಾಮಿಕ ತಾಣ, ವ್ಯಕ್ತಿಗಳನ್ನು ತಮ್ಮ ಕಲಾತ್ಮಕ ನೈಪುಣ್ಯತೆಯಿಂದ ಪರಿಚಯಿಸಿ, ‘ಅಪರಿಚಿತವನ್ನು ಪರಿಚಿತವನ್ನೂ ಸಮಾನ ನೆಲೆಯಲ್ಲಿರಿಸಿಬಿಡುವ’ ಪ್ರಜಾಪ್ರಭುತ್ವವಾದಿ ಕಲಾತ್ಮಕ ದೃಶ್ಯಬೋಧನೆ ಖಂಡೇರಾವ್ ಅವರ ಕೃತಿಗಳ ಮೂಲ ಉದ್ದೇಶ.
ಇದಕ್ಕೊಂದು ನಿರ್ದಿಷ್ಟ ಐತಿಹಾಸಿಕ ಕಾರಣವಿದೆ: ಉತ್ತರ ಕರ್ನಾಟಕದ ಕಲಾವಿದರಿಗೆ 20ನೇ ಶತಮಾನದಾದ್ಯಂತ, ಸ್ವಾತಂತ್ರದ ಪೂರ್ವ ಅಥವ ನಂತರ ಇದ್ದ, ಇರುವ ಮೊದಲ ಕೊರತೆ ವಿಮರ್ಶೆ, ವ್ಯಾಖ್ಯಾನದ್ದು. ಮೈಸೂರು ರಾಜಾಶ್ರಯದಿಂದ ಬಹುದೂರವಿದ್ದ ಅವರುಗಳಿಗೆ ಹೈದರಾಬಾದ್, ಮುಂಬಯಿ, ಪುಣೆ, ಗೋವ ಇತ್ಯಾದಿಗಳ ಪರಕೀಯ ಮೆಚ್ಚುಗೆಯ ವೈವಿಧ್ಯತೆಯ ಆಗುಂತಕ ಒತ್ತಡವಿತ್ತು. ರಾಜಾಶ್ರಯದಲ್ಲಿ ಕಲೆ ಹೆಚ್ಚು ಭಾವಚಿತ್ರಗಳನ್ನು ಕುರಿತದ್ದಾಗಿದ್ದರೆ, ಆ ಆಶ್ರಯದಿಂದ ಹೊರಗುಳಿದವರ ಚಿತ್ರಗಳು ನಿಸರ್ಗ, ಜನಪದ, ಜನಪರವನ್ನು ಕುರಿತದ್ದಾಗಿರುತ್ತದೆ-ರೆನಾಯಸಾನ್ಸ್ ಕಾಲದ ಯುರೋಪಿನ ಕಲೆಯ ಕಾಲದಿಂದಲೂ ಎಲ್ಲೆಡೆ ಇದು ದಿಟ. ಮೈಸೂರಿನಿಂದ ಕರ್ನಾಟಕವಾಗಿ ರಾಜ್ಯವು ಮಾರ್ಪಾಟಾಗುತ್ತಿದ್ದ, ಆದ ಕಾಲಘಟ್ಟದಲ್ಲೇ ಕಲಾವಿದರಾಗಿ, ಶಿಕ್ಷಕರಾಗಿ ಖಂಡೇರಾವ್ ಅವರೂ ಸಹ ರೂಪುಗೊಂಡದ್ದು. ಮೊಬೈಲುಗಳ ಮುಂಚೆ ಹುಟ್ಟಿದ ತಲೆಮಾರಿಗೆ ಸೋಶಿಯಲ್ ಮೀಡಿಯ ಆಪ್‌ಗಳು ಕೊಡುವ ಕಾಟವನ್ನೇ ಅವರೂ ಅನುಭವಿಸಿದ್ದು. ಹೊಸ ಪ್ರಜಾಪ್ರಭುತ್ವವಾದಿ ರಾಜ್ಯದಲ್ಲಿ ಸಿನೆಮ, ಸಾಹಿತ್ಯ, ಚಿತ್ರಕಲೆ ಇತ್ಯಾದಿಗಳಲ್ಲಿ, ಉತ್ತರಕ್ಕಿಂತಲೂ ದಕ್ಷಿಣದ್ದು ಒಂದು ತೂಕ ಹೆಚ್ಚಾದ್ದರಿಂದಲೇ, ಆ ಮೊದಲೇ ವಸಾಹತೀಕರಣದಿಂದ ಜನಪ್ರಿಯವಾಗಿದ್ದ ನಾಡಿನ ತಾಣ, ನೆಲೆಗಳನ್ನು ಈಗ ಮತ್ತಷ್ಟು ಊರ್ಜಿತಗೊಳಿಸಲಾಗುವ ಭರದಲ್ಲಿ, ಯೋಗ್ಯವಾಗಿದ್ದ ಅನೇಕ ತಾಣ, ವ್ಯಕ್ತಿ, ಪ್ರತಿಭೆಗಳನ್ನು ಬದಿಗಿರಿಸಲಾಗಿತ್ತು. ಕಲಾವಿದರ ಕುಂಚಕ್ಕೂ ಅದರ ಬಿಸಿ ತಟ್ಟಿತ್ತು. ಈ ಹಿನ್ನೆಲೆಯಲ್ಲಿ, ನಾಡಿನ ದೃಶ್ಯಕಲೆಯ ರೂಪುರೇಷೆಯ ಮೇಲೆ ರಾಷ್ಟ್ರ, ರಾಜ್ಯದ ಕಲಾತ್ಮಕ ನಿರೀಕ್ಷೆಯ ಒತ್ತಾಯವೂ (ಮುಂಬಯಿಯ ಪ್ರೋಗ್ರಿಸಿವ್ ಗುಂಪು, ದೆಹಲಿಯ ಶಿಲ್ಪಿಚಕ್ರ, ಬೆಂಗಾಲದಲ್ಲಿ ಇನ್ನೂ ಜೀವಂತವಿದ್ದ ಟಾಗೂರರು ಬಿಟ್ಟುಹೋಗಿದ್ದ ಪುನರುಜ್ಜೀವನ ಚಿತ್ರಣ ಕ್ರಮಗಳು) ಇತ್ತು. ಕಲೆಯು ರಾಷ್ಟ್ರೀಯತೆಯನ್ನು ಉತ್ತೇಜಿಸಬೇಕು ಎಂಬ ಕಲ್ಪನೆಯು ಆಗಷ್ಟೇ ಮುಗಿದಿದ್ದ ಕಾಲ. ಇಂತಲ್ಲಿ ಖಂಡೇರಾವ್ ತಮ್ಮ್ ವೃತ್ತಿ (ಶಿಕ್ಷಣ) ಪ್ರವೃತ್ತಿಯನ್ನು (ಕಲಾಸೃಷ್ಟಿ) ಭಿನ್ನಗೊಳಿಸಲು ಒಪ್ಪಲಿಲ್ಲ. ಇಂದಿಗೂ ಶುದ್ಧಾಂಗ ಅಮೂರ್ತ ಚಿತ್ರ, ನೈಪುಣ್ಯ ನೈಜ ಭಾವ ಚಿತ್ರ, ತತ್ವಬದ್ಧತೆಯಿಂದಾದ ವರ್ಣರಹಿತ ನಿಸರ್ಗಚಿತ್ರಗಳನ್ನು ಒಟ್ಟಾರೆ ಇರಬಲ್ಲವು ಎಂಬ ನಂಬಿಕೆಯಿಂದ ಮೂರರಲ್ಲೂ ಕೃಷಿ ಮಾಡುತ್ತಿರುವ ಏಕೈಕ ಕಲಾವಿದ ಖಂಡೇರಾವ್. ನೈಜತೆಯ ನೈಪುಣ್ಯತೆ ಕಲಿತ ನಂತರವೇ ಅಮೂರ್ತಕ್ಕೆಳೆಸಬೇಕು ಎಂಬ ಹಳೆಯ ನಂಬಿಕೆ ಇವರಲ್ಲಿ ಊರ್ಜಿತವೂ ಹೌದು, ನಿರಾಕರಣೆಯೂ ಹೌದು. ಸಹಜವಾಗಿ ಕರ್ನಾಟಕದಲ್ಲಿ ನಿರಂತರವಾಗಿ ಅಮೂರ್ತ ಚಿತ್ರರಚನೆ ಮಾಡುತ್ತಿರುವ ಮೊದಲಿಗೆ, ಹಿರಿಯ ಹಾಗೂ ಏಕೈಕ ಕಲಾವಿದ ಖಂಡೇರಾವ್ ಅವರು.
*
ಬೆಂಗಾಲದ ಶಾಂತಿನಿಕೇತನದ ಕಲಾಪ್ರಭಾವ ದಟ್ಟವಾಗಿದ್ದ, ಇರುವ ಸಂದರ್ಭದಲ್ಲಿ ಖಂಡೇರಾವ್ ಅದಕ್ಕೆ ತದ್ವಿರುದ್ಧವಾಗಿ ಯುರೋಪಿನ ಶಾಸ್ತ್ರೀಯ ಭ್ರಮಾತ್ಮಕ ಚಿತ್ರಣ ತಂತ್ರವನ್ನು ವ್ಯಕ್ತಿಗತವಾಗಿ ಮಾರ್ಪಡಿಸಿದ್ದಾರೆ. ಇವರ ಚಿತ್ರಗಳನ್ನು ದೂರದಿಂದ ವೀಕ್ಷಿಸಿದಾಗ ಕಾಣುವ ವಿವರ, ವೈವಿಧ್ಯ, ಅಥವ ಅವುಗಳ ಭ್ರಮಾತ್ಮಕ ಕಲ್ಪನೆ, ಹತ್ತಿರದಿಂದ ನೋಡಿದಾಗ ಇಲ್ಲವಾಗಿ, ಅವುಗಳ ಮೂಲ ರೇಖ, ವರ್ಣದ ಆಯ್ಕೆ, ಚಿತ್ರಿಸಿರುವ ರೀತಿ ಇವೆಲ್ಲ ಅನಾವರಣಗೊಳ್ಳುತ್ತವೆ. ಕಂಪ್ಯೂಟರಿನಲ್ಲಿ ಫೋಟೋವೊಂದರ ಮೂಲಭೂತ ಗುಣಲಕ್ಷಣಗಳನ್ನು (‘ಪ್ರಾಪರ್ಟಿಸ್’) ನೋಡಿದಂತೆ ಇದು. ಹತ್ತಿರದಿಂದ ನೋಡುತ್ತ ಚಿತ್ರಿಸುವ ಕಲಾವಿದ, ದೂರದಿಂದ ಕಾಣುವ ವೀಕ್ಷಕನ ದೃಷ್ಟಿಯನ್ನು ಮನಸ್ಸಿನಲ್ಲಿರಿಸಿಕೊಂಡು, ಅವರಿಗೆ ಗೋಚರಿಸುವ ದೃಶ್ಯವನ್ನು ತನ್ನ ನಿಯಮ, ನಿಲುವಿನ ಅನುಸಾರವಾಗಿ ಚಿತ್ರಿಸುವ ಖಂಡೇರಾವ್ ಅವರ ನೈಪುಣ್ಯತೆಯು ಅಪರೂಪದ್ದು.
ದಕ್ಷಿಣ ಭಾರತವನ್ನು ಪ್ರತಿನಿಧಿಸುವ, ಕರ್ನಾಟಕದಲ್ಲಿರುವ ಎನ್.ಜಿ.ಎಂ.ಎಯಲ್ಲಿ ಅಪರೂಪಕ್ಕೆ ಕರ್ನಾಟಕದ ಕಲಾಪ್ರತಿಭೆಯೊಂದರ ಪ್ರದರ್ಶನವಿದು. ಕರ್ನಾಟಕ ಎಂಬ ನಿರ್ಮಿತಿಯನ್ನು ವಿಮರ್ಶಾತೀತವಾಗಿ ತಾನು ಒಪ್ಪಿಕೊಳ್ಳಲಾರೆ ಎಂದು ಕೃತಿಗಳ ಮುಖೇನವೇ ಸಾರುವ ಕ್ರಿಟಿಕಲ್-ಇನ್ಸೈಡರ್ ಇವರು. ಕಂಡದ್ದನ್ನು ಯಥಾವತ್ ಚಿತ್ರಿಸದೆ, ಅದನ್ನು ಎಷ್ಟು ಸಲ ನೋಡಲಾಗಿದೆಯೋ ಅಷ್ಟೂ ಸಲದ ಅನುಭವದ ಮೊತ್ತವನ್ನು ಸ್ಮೃತಿಯ ಪೊಟ್ಟಣವನ್ನಾಗಿಸಿ, ಆ ಅನುಭವವನ್ನು ಕಂಡ ಚಿತ್ರದ ಗೋಚರ ರೂಪದ ಮೇಲೆ ಬಿಡಿಸುವ ಕಲೆ ಇವರದ್ದು. ಬಹಳ ಸದ್ದು ಮಾಡಿ, ಕೊನೆಗೆ ಹೊರಟಾಗ ತಮ್ಮ ಸಾಧನೆಯನ್ನು ಕಟ್ಟಡ, ನಿಯಮ, ಹೆಸರಿನಿಂದಷ್ಟೇ ಉಳಿಸಿಹೋಗಿಬಿಡುತ್ತಿರುವ ಕಲಾವ್ಯಕ್ತಿತ್ವಗಳ ನಡುವೆ, ಇವೆಲ್ಲವನ್ನೂ ಬದಿಗಿರಿಸಿ ಕೇವಲ ತಮ್ಮ ಸೃಜನಶೀಲ ಅಭಿವ್ಯಕ್ತಿಯಿಂದ ಮಾತ್ರ ಮಾನ್ಯರಾಗಿರುವ, ಅವುಗಳನ್ನು ಭವಿಷ್ಯಕ್ಕೆ ಕೊಡಮಾಡಿರುವ ವ್ಯಕ್ತಿತ್ವ ಖಂಡೇರಾವ್ ಅವರದ್ದು. ಕನ್ನಡದ ಕಲಾ ಕ್ಯುರೇಟರ್‌ಗಳಾದ ಎನ್.ಜಿ.ಎಂ.ಎಯ ದರ್ಶನ್ ಹಾಗೂ ರೇಖಾ ಅವರ ಯತ್ನದ ಫಲವಾಗಿ ಕನ್ನಡದ ಕಲಾಪ್ರತಿಭೆಯೊಂದರ ಅಪರೂಪದ ರೆಟ್ರೋಸ್ಪೆಕ್ಟ್ ಪ್ರದರ್ಶನವಾಗಿದೆ ಇದು.//
as published on 15.11.2018
Recent Comments