-ಎಚ್. ಎ. ಅನಿಲ್ ಕುಮಾರ್
ಒಮ್ಮೆ ಬೆಂಗಳೂರಿನ ಎಚ್.ಎ.ಎಲ್ ಏರ್‌ಪೋರ್ಟಿನಲ್ಲಿ ರಾಜ್‌ಕುಮಾರ್ ಅವರನ್ನು ಕಲಾವಿದ ಯೂಸುಫ್ ಅರಕ್ಕಲ್ ಆಕಸ್ಮಿಕವಾಗಿ ಭೇಟಿಯಾದರಂತೆ. ಆಗಷ್ಟೇ ರಾಜಕುಮಾರರ ಚಿತ್ರಗಳ ಕೊಲಾಜ್ ಕೃತಿಯೊಂದನ್ನು ಯೂಸುಫ್ ಕನ್ನಡದ ಖ್ಯಾತ ಪತ್ರಿಕೆಯೊಂದಕ್ಕೆ ರಚಿಸಿಕೊಟ್ಟು, ಅದು ಮುದ್ರಣವಾಗಿ ಎಲ್ಲರ ಗಮನ ಸೆಳೆದಿತ್ತು. “ಓಹೋ ಯೂಸುಫ್, ನನ್ನನ್ನು ಕುರಿತಾದ ನಿಮ್ಮ ಚಿತ್ರ ಬಹಳ ಚೆನ್ನಾಗಿದೆ” ಎಂದರಂತೆ ಅಣ್ಣಾವ್ರ. ಇದನ್ನು ಯೂಸುಫ್ ಮಲೆಯಾಳಂ-ಕನ್ನಡದ ಉಚ್ಛರಣೆಯಲ್ಲಿ ನಟಸಾರ್ವಭೌಮರನ್ನು ಅನುಕರಿಸಿ ಎಲ್ಲರಿಗೂ ಅಭಿಮಾನದಿಂದ ವಿವರಿಸುತ್ತಿದ್ದುದು, ಕನ್ನಡಿಗ ಕಲಾವಿದರು ತುಂಬಿದ್ದ ಪ್ರತಿ ಕಲಾಪಾರ್ಟಿಗಳ ಹೈಲೈಟ್ ಆಗಿರುತ್ತಿತ್ತು. ತಾನೊಬ್ಬ ‘ಕನ್ನಡದ ಕಲಾವಿದ’ನೆಂದು ನಿರೂಪಿಸುವ ಹಠ ಯೂಸಫರಲ್ಲಿ ಸ್ಥಾಯಿಯಾಗಿತ್ತು. ತನ್ನ ಯೋಗ್ಯತೆಗೆ ತಕ್ಕ ಮಾನ್ಯತೆ ದೊರಕದೆಂಬ ಜನಜನಿತ ಕಲಾವಿದರ ನಂಬಿಕೆಯೇ ಯೂಸುಫ್‌ರ ಕಲಾವ್ಯಕ್ತಿತ್ವದ ಒಟ್ಟಾರೆ ಸಾರೆವೆಂದರೆ ನಂಬುವುದು ಕಷ್ಟವೇ ಆದರೂ ಸತ್ಯ. ಕನ್ನಡದ ಎಸ್.ಜಿ.ವಾಸುದೇವ್ ಅವರು ಭಾಷಣಗಳನ್ನು ಮಾಡುವಾಗ ಒಂದೆರೆಡು ವಾಕ್ಯಗಳ ನಂತರ ಕನ್ನಡದಿಂದ ಇಂಗ್ಲೀಷಿಗೆ ಶಿಫ್ಟ್ ಆಗಿಬಿಟ್ಟರೆ, ಯೂಸುಫ್ ಹಠಕ್ಕೆ ಬಿದ್ದಂತೆ ಮಲಯಾಳಂ ಉಚ್ಛಾರಣೆಯ ಕನ್ನಡದಲ್ಲೇ ಸಾಧ್ಯಂತವಾಗಿ ಮಾತನಾಡುತ್ತಿದ್ದರು. ದೇವನೂರು ಮಹಾದೇವರ ‘ಒಡಲಾಳ’ದ ಮುಖಪುಟ ರಚಿಸಿಕೊಟ್ಟದ್ದಕ್ಕೆ, ಅವರಿಂದ ಯೂಸುಫ್ ಅವರಿಗೆ ದೊರೆತ ಶ್ಲಾಘನೆ ಎಂದರೆ, “ಈ ನೆಲದ ಮಣ್ಣಿನಮಗ” ಎಂದು.
ಇಪ್ಪತ್ತು ವರ್ಷದ ಹಿಂದೊಮ್ಮೆ ಯೂಸುಫ್ ಅರಕ್ಕಲ್ ಅವರು ತಮ್ಮ ಕೃತಿಗಳನ್ನು ಮಧ್ಯಪ್ರಾಚ್ಯ ದೇಶವೊಂದರಲ್ಲಿ ನಾಲ್ಕು ಕೋಟಿಗೆ ಮಾರಾಟ ಮಾಡಿದರೆಂಬ ಸುದ್ಧಿ ಹಬ್ಬಿತು. ಅದನ್ನು ಕುರಿತು ಅವರಲ್ಲೇ ವಿಚಾರಿಸಿದಾಗ, “ಅದೆಲ್ಲ ಅರೆಸುಳ್ಳು” ಎಂದು ನಗಾಡಿದ್ದರು. “ಅಂದರೆ ಅದು ಅರ್ಧ ಸತ್ಯವಾದರೂ ನೀವು ಈಗ ಕೋಟ್ಯಾಧಿಪತಿಯಲ್ಲವೆ?” ಎಂದುಚ್ಚರಿಸಿದ್ದೆ. “ನಾನು ರಿಚಸ್ ಟು ರ‌್ಯಾಗ್ಸ್ ಟು ರಿಚಸ್ ವ್ಯಕ್ತಿತ್ವದವ” ಎಂದು ಮತ್ತೆ ನಕ್ಕಿದ್ದರು. ಅವರ ತಾಯಿ ಅರಕ್ಕಲ್ ರಾಜವಂಶದವರಾಗಿದ್ದರು. ಈ ಕಲಾವಿದ ತನ್ನ ಬಾಲ್ಯಾವಸ್ಥೆಯಲ್ಲೇ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿಬಿಟ್ಟಿದ್ದರಂತೆ. “ನಮ್ಮ ತಾತ ತನ್ನ ಊರಿನ ಕೆರೆಯ ಕಟ್ಟೆಯಲ್ಲಿರುವ ರಂಧ್ರವನ್ನು ಗಮನಿಸಿ, ಅದನ್ನು ತಡೆದು ರಾತ್ರಿಯಾಧ್ಯಂತ ಅಲ್ಲಿಯೇ ನಿಂತು, ಊರು ಕೊಚ್ಚಿಕೊಂಡು ಹೋಗುವುದನ್ನು ತಡೆದಿದ್ದರು. ಅದರಿಂದಲೇ ಮುಂದೆ ಆರೋಗ್ಯ ಆಯುಷ್ಯವೆರಡನ್ನೂ ಕಳೆದುಕೊಂಡರು” ಎಂಬ ತಮ್ಮ ‘ರಿಚಸ್ ಟು ರ‌್ಯಾಗ್ಸ್’ ಕಥೆ ಹೇಳುವುದರಲ್ಲಿ ಈ ಕಲಾವಿದ ಮುದಕಾಣುತ್ತಿದ್ದರು. ತದನಂತರ ಬೆಂಗಳೂರಿನ ಬೀದಿಗಳಲ್ಲಿ ಬದುಕು, ಅವರ ಸಂಬಂಧಿಯೊಬ್ಬರು ಇವರನ್ನು ಗುರ್ತಿಸಿ ಓದಿಸಿ, ಮಗಳನ್ನು ಕೊಟ್ಟು ಮದುವೆ ಮಾಡಿಸಿದ್ದು, ‘ರ‌್ಯಾಗ್ಸ್ ಟು ರಿಚಸ್’ ಎಂಬುದು ಇವರ ಮಧ್ಯಂತರೋತ್ತರದ ಬದುಕಿನ ಸಂಕ್ಷಿಪ್ತ ಚರಿತ್ರೆ.
ಯಾವುದೇ ರೀತಿಯ ಸರ್ಕಾರಿ ಹಾಗೂ ಸಾಂಸ್ಕೃತಿಕ ಆಸರೆಯೂ ಇಲ್ಲದಿದ್ದ ಕರ್ನಾಟಕದ ದೃಶ್ಯಕಲೆಯಲ್ಲಿ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಮಟ್ಟಕ್ಕೆ ಏರಿದ್ದು, ಅದೂ ಅಖೇಲೆಯಾಗಿಯೇ, ಯೂಸಫರ ಮುಖ್ಯ ಸಾಧನೆಗಳಲ್ಲೊಂದು. ದಕ್ಷಿಣ ಭಾರತವನ್ನು ಭಾರತೀಯ ಕಲಾ ಇತಿಹಾಸವು ಆಸಡ್ಡೆ ಮಾಡಿದೆಯೆಂಬ ವಿವಾದಾತೀತ ವಿಷಯವನ್ನು ವಿವಾದಿತವಾಗುತ್ತದೆಂಬ ಹಿಂಜರಿಕೆಯಿಂದ ಕಲಾವಿದರು ಮಾತನಾಡದಿದ್ದ ಸಂದರ್ಭದಲ್ಲಿಯೂ ಅದನ್ನು ಕುರಿತು ಖಡಕ್ ಅಭಿಪ್ರಾಯಗಳನ್ನು ವ್ಯಕ್ತಿಪಡಿಸುತ್ತಿದ್ದವರು ಯೂಸುಫ್.
ಕಲಾವಿದರೆಂದರೆ ಗಡ್ಡ-ಜುಬ್ಬದ ಅರೆಹುಚ್ಚನಲ್ಲ ಎಂಬ ಮಾದರಿಯನ್ನು ರೂಢಿಸಿಕೊಂಡಿದ್ದ ಇವರ ನಡೆ, ನುಡಿ ಇತ್ಯಾದಿಯೆಲ್ಲವೂ ಎಲಿಟಿಸ್ಟ್ ಅಭಿರುಚಿಯಂತಿತ್ತು. ಅದರಾಚೆಗೂ ಕೂಡ ರಾಜ್ಯದ ಕಲಾವಲಯದ ಪ್ರಜ್ಞೆಯನ್ನು ಹೊಕ್ಕಿಬರಲು ಕನ್ನಡವನ್ನು ಕಲಿತರು. ದಶಕಗಳಗಟ್ಟಲೇ ಕರ್ನಾಟಕದಲ್ಲಿದ್ದೂ “ಕನ್ನಡ ಬರುವುದಿಲ್ಲ” ಎಂಬಷ್ಟೂ ಕನ್ನಡ ಬರದ ಕಲಾವಿದರುಗಳ ದಂಡೇ ನಮ್ಮ ನಡುವೆ ಇದೆ. ಭಾಷೆಯನ್ನಾಗಿ ಭಾವಿಸದೆ ಕನ್ನಡವನ್ನು ಒಂದು ದೃಶ್ಯಕಲೆಯ ಸಂವಹನ ಮಾಧ್ಯಮವನ್ನಾಗಿಯೂ ರೂಡಿಸಿಕೊಳ್ಳಬಹುದೆಂದು ಸ್ವತಃ ಸಾಧಿಸಿಕೊಂಡದ್ದು ಯೂಸುಫರಿಗೆ, ಅವರ ಕಲಾಕೃತಿಗಳಷ್ಟೇ ಇದು ಮುಖ್ಯವಾಗಿತ್ತು.
೧೯೯೨ರಲ್ಲಿ ನನ್ನ ಕಲಾವಿಮರ್ಶಕ ವೃತ್ತಿಯ ಮೊದಲ ಲೇಖನ ಕರ್ನಾಟಕ ಲಲಿತಕಲಾ ಅಕಾಡೆಮಿಗಾಗಿ ಬರೆದದ್ದಾಗಿತ್ತು. ರಾಷ್ಟ್ರಪ್ರಶಸ್ತಿ ವಿಜೇತರಾದ ಕಾರಣದಿಂದಾಗಿ ಯೂಸುಫ್ ಅರಕ್ಕಲ್ ಬಗ್ಗೆ ಬರೆಯಬೇಕಿತ್ತು. “ನಿನ್ನಂತಹ ಯುವಕ ನನ್ನ ಬಗ್ಗೆ ಬರೆಯಲು ನನಗೆ ಯಾವುದೇ ಅಭ್ಯಂತರವಿಲ್ಲ” ಎಂದಿದ್ದರವರು. ಆಗಷ್ಟೇ ಶಾಂತಿನಿಕೇತನದಲ್ಲಿ ಔಪಚಾರಿಕ ಕಲಾಇತಿಹಾಸವನ್ನು ಕಲಿತುಬಂದಿದ್ದ ನನ್ನ ಬಗ್ಗೆ ಸ್ಥಾಪಿತ ಕಲಾವಿದರು ಹೀಗೂ ಮತ್ತು ಹೀಗೆ ಮಾತ್ರ ಭಾವಿಸುತ್ತಾರಲ್ಲ ಎಂದು ಅಚ್ಚರಿಯಾಗಿತ್ತು. ಅವರ ಪ್ರಖ್ಯಾತ “ಗಾಂಧಿ” ಕೃತಿಯನ್ನು ಕುರಿತು, ಒಂದೇ ಕೃತಿಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಬರೆದಾಗ ಖುಷಿಪಟ್ಟಿದ್ದರು. ಅವರ ಮೆಚ್ಚುಗೆಯು ಬರವಣ ಗೆಯನ್ನು ಕುರಿತದ್ದೋ ಅಥವ ಅವರ ಕೃತಿಯ ಬಗ್ಗೆ ಬರೆದದ್ದರಿಂದಲೋ ಎಂಬ ಅನುಮಾನ ಮಾತ್ರ ಹಾಗೆಯೇ ಉಳಿದುಬಿಟ್ಟಿತ್ತು.
ಕಲಾವಿದನಾಗಿ ಯೂಸಫ್ ಅವರದ್ದು ದಶಾವತಾರ. ಚಿತ್ರ, ಶಿಲ್ಪ, ಪ್ರಿಂಟ್‌ಮೇಕಿಂಗ್, ಕಾವ್ಯ ರಚನೆ, ಭಿತ್ತಿಚಿತ್ರ ಇತ್ಯಾದಿಗಳನ್ನು ರಚಿಸಿರುವ ಇವರ ಪ್ರತಿಭೆಯನ್ನು ಕುರಿತಾದ, ಲಲಿತಕಲಾ ಅಕಾಡೆಮಿಯಿಂದ ಪ್ರಕಟವಾಗಬೇಕಿದ್ದ ಪುಸ್ತಕವೊಂದು ಅಸಲಿ ಕನ್ನಡದಿಂದ ಇಂಗ್ಲೀಷಿಗೆ ಭಾಷಾಂತರವಾಗಬೇಕಿತ್ತು. ಖ್ಯಾತ ವಿಮರ್ಶಕರೊಬ್ಬರು ಅದನ್ನು ಇಂಗ್ಲೀಷಿಗೆ ತರ್ಜುಮೆ ಮಾಡಿದಾಗ, ಅದರಲ್ಲಿದ್ದ ಆ ಮೊದಲೇ ಇದ್ದ ಯೂಸುಫರ ಅಸಲಿ ಇಂಗ್ಲೀಷ್ ಕಾವ್ಯವೊಂದರ ಕನ್ನಡದ ಭಾಷಾಂತರವೂ ಮತ್ತೆ ಇಂಗ್ಲೀಷಿಗೆ ಭಾಷಾಂತರಕಾರರ ಕೈಯಿಂದ ಪುನರ್-ಭಾಷಾಂತರವಾಗಿಬಿಟ್ಟಿತ್ತು! ತಾವೇ ಬರೆದ ಇಂಗ್ಲೀಷ್ ಕಾವ್ಯದ ಎರಡು ಆವರ್ತಿಯ ಭಾಷಾಂತರದಲ್ಲಿ ಮತ್ತೆ ಇಂಗ್ಲೀಷಿನಲ್ಲಿ ಓದುವ ದೌರ್ಭಾಗ್ಯ ಅವರದ್ದಾಗಿತ್ತು. ಇದಕ್ಕೆ ಮತ್ತು ಇಂತಹದಕ್ಕೆಲ್ಲ ಯೂಸುಫ್ ಓಕೆ ಎನ್ನದೆ ವಿಧಿಯಿರಲಿಲ್ಲ, ಅವರು ಬೆಳೆದು ಬಂದ ವೈಚಾರಿಕ ಸಂದರ್ಭಗಳ ಕೊರತೆಯೂ ಅಂತಹದಿದ್ದಿತ್ತು. ಅದೂ ನವ್ಯ, ದಲಿತ, ‘ಬೂಸಾ’, ಅಂಚಿನ ಸಾಹಿತ್ಯ, ಗೋಕಾಕ್ ಚಳುವಳಿ ಮುಂತಾದುವುಗಳು ಜೋರಿದ್ದ ಕಾಲದಲ್ಲಿ, ಕಲಾವಿದರಾಗಿ ರೂಪುಗೊಳ್ಳುತ್ತಿದ್ದ ಯೂಸುಫ್, ಮಲಯಾಳಂ-ಕನ್ನಡ ಸಂಸ್ಕೃತಿಗಳ ಒಂದು ವಿಶೇಷ ಸಮ್ಮಿಶ್ರಣದ ಜ್ಞಾನಾರ್ಜನೆಯನ್ನು ಸ್ವಯಂವೈದ್ಯದಂತೆ ರೂಢಿಸಿಕೊಂಡಿದ್ದರು.
*
ವಯೋವೃದ್ಧ ಪ್ರೊ.ಕೆ.ಜಿ.ಸುಬ್ರಹ್ಮಣ್ಯನ್ ಅವರು ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಗೆ ಬಂದಿದ್ದಾಗ, ತಡವಾಗಿ ಬಂದ ಯೂಸುಫ್ ಕೂಡಲೇ ಬಾಗಿ ಅವರ ಪಾದಸ್ಪರ್ಶ ಮಾಡಿದರು. “ನನ್ನ ಕಾಲೆಳೆಯಬೇಡಿ ಪ್ಲೀಸ್” ಎಂದಿದ್ದರು ಕೆ.ಜಿ.ಎಸ್. ಬೇರೆಲ್ಲಾ ಸಂದರ್ಭದಲ್ಲಿ ಕಾಣದ ವ್ಯಕ್ತಿತ್ವ ಯೂಸುಫರದ್ದಾಗಿತ್ತು. ಅವರ ನಡೆನುಡಿ, ಕೃತಿ, ಕಲಾಸಮುದಾಯದೊಂದಿಗಿನ ಅವರ ಸೌಹಾರ್ದ, ಇವೆಲ್ಲವುಗಳ ಮೂಲಕ ಇವರು ಯತ್ನಿಸುತ್ತಿದ್ದುದೇನು? ೭೦, ೮೦ರ ದಶಕದಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಕಲಾವಿದರಾಗುವುದೆಂದರೆ, ಸಮಾಜದಲ್ಲಿ ಕಲಾವಿದರಿಗೊಂದು ಸ್ಥಾನವನ್ನು ನಿರ್ಧರಿಸಿಕೊಳ್ಳುವುದು, ಅದಕ್ಕೊಂದು ಮಾದರಿಯನ್ನು ತಯಾರಿಸುವುದು ಮತ್ತು ಅದರಂತೆ ಕಲಾವಿದರಾಗಿಬಿಡುವುದು. ಇವಿಷ್ಟನ್ನೂ ಯೂಸುಫ್ ಅನಿವಾರ್ಯವಾಗಿ ಮಾಡಬೇಕಾಗಿ ಬಂದಿತು. ಅವರಿಗೂ ಮುನ್ನ ರಾಷ್ಟ್ರೀಯ ಮಟ್ಟದ ಕನ್ನಡದ ಕಲಾವಿದರಾಗಿ ಕೆ.ವೆಂಕಟಪ್ಪನವರು ಸ್ಥಾಪಿತರಾದುದೊಂದು ಆಕಸ್ಮಿಕ, ಹೆಬ್ಬಾರರು ಪ್ರಸಿದ್ಧರಾದುದು ಹೆಚ್ಚೂ ಕಡಿಮೆ ಮುಂಬಯಿಯ ಪ್ರೋಗ್ರೆಸಿವ್ ಕಲಾತಂಡದೊಂದಿಗೆ ಗುರ್ತಿಸಿಕೊಂಡಿದ್ದರಿಂದಲೇ. ಅವರಷ್ಟೇ ಕಲಾತ್ಮಕ ಪ್ರತಿಭೆ ಹೊಂದಿದ್ದ ರುಮಾಲೆ ಚೆನ್ನಬಸಪ್ಪನವರು ಇನ್ನೂ ಜನಪ್ರಿಯತೆಯನ್ನು ಈಗಲೂ ಆ ಮಟ್ಟ ಮುಟ್ಟಿಲ್ಲ.
ಏಕಾಂಗಿಯಾಗಿ ಯೂಸುಫ್ ಕಲಾವಿದರಾದುದು ಒಂದು ಹಂತ, ಅದನ್ನು ಉಳಿಸಿಕೊಳ್ಳಲು ಯತ್ನಿಸಿದ್ದು ಮತ್ತೊಂದು ಹಂತ. ಅದಕ್ಕೆ ಪೂರಕವಾಗಿ ಯೂಸುಫ್ ತಮ್ಮ ಕೃತಿಗಳ ಬಗ್ಗೆ ಸ್ವತಃ ಕೆಟಲಾಗ್, ಪುಸ್ತಕಗಳನ್ನು ಪ್ರಕಟಿಸಿಕೊಂಡರು. ಡಾ.ಆರ್.ಎಚ್. ಕುಲಕಣ ಯರ್ವರು ಸಂಪಾದಿಸಿದ “ಕಲಾವಿದನ ಹೆಜ್ಜೆ ಗುರುತುಗಳು” ಎಂಬ ಪುಸ್ತಕ (೨೦೧೨) ಅಂತಹ ಪ್ರಯತ್ನಗಳಲ್ಲಿ ಇತ್ತೀಚಿನದ್ದು. ತೀರ ವಿಮರ್ಶಾತ್ಮಕವಾಗಿದ್ದ ಕಲಾಸಾಹಿತಿಗಳನ್ನು ಹತ್ತಿರ ಸೇರಿಸಿದ್ದರಿಂದ, ಅವರ ಪ್ರತಿಭೆ ಕುರಿತ ಗಂಭೀರ ಸ್ವೀಕೃತಿ ಸಾಧ್ಯವಾಗದಿದ್ದರೂ ಮಾರುಕಟ್ಟೆ ಕುದುರಿತು. ಈಗ, ಮರಣೋತ್ತರವಾಗಿ ಸಾಧಾರಣವಾಗಿ ನಾವು ಕೇಳಿಕೊಳ್ಳದ, ಆದರೆ ಕೇಳಿಕೊಳ್ಳಲೇಬೇಕಾದ ಪ್ರಶ್ನೆಯೆಂದರೆ: ಕಲಾವಿದರಾಗಿ ಯೂಸುಫರನ್ನು ನಾವು ಹೇಗೆ ನೆನೆಪಿಸಿಕೊಳ್ಳುತ್ತೇವೆ? ಅಥವ ಅವರ ಕೃತಿಗಳನ್ನು ವೆಂಕಟಪ್ಪ, ಹೆಬ್ಬಾರ್ ಅವರುಗಳ ಪ್ರತಿಭೆಯಂತೆ, ಪಠ್ಯಪುಸ್ತಕದಂತೆ ಸ್ವೀಕರಿಸಬಲ್ಲೆವೆ? ಅಥವ ಕಲಾಶಿಕ್ಷಣದ ಪ್ರತಿಭೆಗಾಗಿ ಆರ್.ಎಂ.ಹಡಪದ್, ವಿ.ಜಿ. ಅಂದಾನಿಯವರಂತೆ ನೆನೆಸಿಕೊಳ್ಳುತ್ತೇವೆಯೇ? ಇಲ್ಲವಾದಾಗ ವ್ಯಕ್ತಿಯನ್ನು ಹೇಗೆ ನೆನೆಸಿಕೊಳ್ಳುತ್ತೇವೆಯೋ ಅದರಂತೆ ಅವರು ಬದುಕಿದ, ಬದುಕಿದ್ದಾಗಿನ ಗುಣಮಟ್ಟವನ್ನು ಮಾಪನ ಮಾಡುತ್ತೇವೆ.
*
ರಾಜ್ಯೋತ್ಸವ ಪ್ರಶಸ್ತಿ, ಕೆ.ವೆಂಕಟಪ್ಪ ಪ್ರಶಸ್ತಿ, ಲಲಿತಕಲಾ ಅಕಾಡೆಮಿಯ ರಾಷ್ಟ್ರಪ್ರಶಸ್ತಿ, ಕೇರಳದ ರಾಜಾ ರವಿವರ್ಮ ಪ್ರಶಸ್ತಿ ಎಂಬ ರೆಗ್ಯುಲೇಷನ್ ಪ್ರಶಸ್ತಿಗಳೊಂದಿಗೆ ಹೆಸರೂ ಕೇಳಿರದ ಮಾನ್ಯತೆಗಳಿಗೂ ಭಾಜನರಾಗಿದ್ದ ಯೂಸುಫ್ ಮೂಲಭೂತವಾಗಿ ಬಹಿರ್ಮುಖಿಯಂತಾಡುತ್ತಿದ್ದ ಅಂತರ್ಮುಖಿ. ಯಾವ ಸಾಂಸ್ಕೃತಿಕ ಆವರಣದಲ್ಲಿಯೂ ಸುಲಭಕ್ಕೆ ಕಾಣ ಸಿಕೊಳ್ಳದಿದ್ದ ಇವರಿಗೆ ತಮ್ಮ ಕೃತಿಯ ಮೂಲಕ ಮಾತ್ರ ತಾನು ಗುರುತಿಸಿಕೊಳ್ಳಬೇಕೆಂಬ ಒಂದು ಮಾಡರ್ನಿಸ್ಟ್ ಬಯಕೆ ತುಂಬಾ ಇತ್ತು. ಭಿಕಾಷ್ ಭಟ್ಟಾಚಾರ್ಯ, ಸುಧೀರ್ ಪಟವರ್ಧನರಂತೆ ಇವರ ಚಿತ್ರಗಳು ಭಾರತೀಯ ನಗರೀಕರಣದ ಬದುಕು, ಅದರೊಳಗೆ ಕೆಳಮಧ್ಯಮವರ್ಗದ ಏಕಾಂಗಿತನ ಹಾಗೂ ಪ್ರತ್ಯೇಕಿತ ಭಾವದ ವಿರಾಟ್ ರೂಪವನ್ನು ಸಫಲವಾಗಿ ಹಿಡಿದಿರಿಸಿದ್ದರು. ವೈರುಧ್ಯಮಯ ಅಂಶವೆಂದರೆ, ವಿಕ್ಷಿಪ್ತತೆಯನ್ನು ಕುರಿತಾದ ಇವರ ಕೃತಿಗಳು ಕಾರ್ಪೊರೇಟ್ ಜಗಲಿ, ಮಂಚ, ಪ್ರಾಂಗಣಗಳಲ್ಲೆಲ್ಲ ಹರಡಿಕೊಂಡಿರುವುದು. ಒಂದರ್ಥದಲ್ಲಿ ಇವರ ದುರವಸ್ಥೆಯನ್ನು ಅವರ ಗಮನಕ್ಕೆ ತರುವಂತಹ ಕೃತಿಗಳಾಗಿದ್ದರೂ, ಇದು ಸರಳೀಕೃತ ಅರ್ಥದಲ್ಲಿ ಬಡತನ-ಶ್ರೀಮಂತಿಕೆಯ ಘರ್ಷಣೆಯಲ್ಲ.
ತಮ್ಮ ಕ್ಯಾನ್ವಾಸುಗಳಲ್ಲಿ ವಿಶಾಲ, ನಿಗೂಢ, ಅಸ್ಪಷ್ಟ ಗಾಢ ಕಗ್ಗತ್ತಲನ್ನು ಸೃಷ್ಟಿಸುವಲ್ಲಿ ಇವರಿಗೊಂದು ಸಮಾಧಾನವಿತ್ತು. ಅವುಗಳಲ್ಲಿನ ಮಾನವಾಕಾರಗಳು ನಿಕೃಷ್ಟ ಹಾಗೂ ಕ್ಷೀಣ, ಆಕಾರದಲ್ಲೂ ಸಹ. ಕಾಗದದ ಮನುಷ್ಯರು, ಗಂಗಾ ಸರಣ , ಪಂಚಲೋಹದ ಏಕಾಂಗಿ ವ್ಯಕ್ತಿಗಳು, ಕ್ಯಾತೆ ಕೋಲ್‌ವಿಜ್ ಹಾಗೂ ಎಕ್ಸ್‌ಪ್ರೆಷನಿಸಂ ಕಲಾವಿದರು ಹಾಗೂ ಕಲಾಶೈಲಿಗಳು -ಇವೆಲ್ಲವೂ, ಬದುಕು ಹಾಗೂ ಕಲೆ ಎರಡೂ ಸಹ ಇವರ ಕೃತಿಗಳ ಮೂಲಕದ ಇವರ ಬದುಕಿನ ಆಸಕ್ತಿಯ ವಿಷಯಗಳಾಗಿದ್ದವು. ನಿಗೂಢವನ್ನು ಶೋಧಿಸದೆ ಅದರೊಂದಿಗೆ ಒಡಂಬಡಿಕೆ ಮಾಡಿಕೊಂಡದ್ದು ಕಲಾವಿದ ಯೂಸುಫರ ವಿಶೇಷ ಮಾರ್ಗವಾಗಿತ್ತು.
ನಾಳೆ ನಾವು ಅವರ ಕೃತಿಗಳನ್ನು ಅಪ್ಯಾಯಮಾನವಾಗಿ ನೆನೆಸಿಕೊಳ್ಳಲಾರೆವೇನೋ, ಆದರೆ ಅವರ ಶೈಲಿಯನ್ನು, ಅದು ಪ್ರಕಟಿಸಿದ್ದಕ್ಕಿಂತಲೂ ನಿಗೂಢಗೊಳಿಸಿದ್ದನ್ನು, ಮರೆಯಲಾಗದು. ಅಸ್ತಿತ್ವವಾದಿ ನೆಲೆಯ ಮೊದಲ ಪ್ರಮುಖ ಕನ್ನಡದ ದೃಶ್ಯಕಲಾವಿದರ ಈ ಕೊಡುಗೆ ಇನ್ನು ಮುಂದೆ ಅಸಂಗತ ನಾಟಕ, ಅಮೂರ್ತ ಚಿತ್ರ, ಕಲಾಸಿನೆಮಗಳೊಂದಿಗೆ ಮೈಳೈಸಿ ಕನ್ನಡ ಸಂಸ್ಕೃತಿಯ ಹೊಸ ಆಯಾಮವೊಂದನ್ನು ಶೋಧಿಸುವುದು ಈಗಿನ ತುರ್ತು ಅಗತ್ಯವಾಗಿದೆ. ಅದು ಪೂರೈಕೆಯಾದಾಗ ಯೂಸುಫರ ಕೊಡುಗೆಯ ಅನನ್ಯತೆ ನಮ್ಮ ನಾಡಿಗೆ ವೇದ್ಯವಾಗಬಹುದು.//
5ನೇ ಅಕ್ಟೋಬರ್ 2016
Recent Comments