-ಎಚ್.ಎ. ಅನಿಲ್ ಕುಮಾರ್


ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕದ ಕಲಾವಿದರ ಸಂಖ್ಯೆ ಅತಿ ಕಡಿಮೆ. ೧೯೮೦ ಹಾಗೂ ೯೦ರ ದಶಕದಲ್ಲಂತೂ ಕೇವಲ ಬೆರಳೆಣ ಕೆಯಷ್ಟು ಕಲಾವಿದರು ಮಾತ್ರ ಹಾಗಿದ್ದರು. ಯೂಸುಫ್ ಅರಕ್ಕಲ್ ಅಂತಹ ಕೆಲವರಲ್ಲಿ ಪ್ರಮುಖರಾದರೂ, ಯಾವುದೇ ಕಲಾ ಗುಂಪಿನೊಂದಿಗೆ, ಕಲಾಶಾಲೆಗಳೊಂದಿಗೆ ಪ್ರಜ್ಞಾಪೂರ್ವಕವಾಗಿ ಗುರ್ತಿಸಿಕೊಳ್ಳದೆ ಏಕಾಂಗಿಯಾಗಿಯೆ ಖ್ಯಾತಿ ಹೊಂದದ್ದು ಅವರ ಇಚ್ಛಾಶಕ್ತಿಗೊಂದು ಸಾಕ್ಷಿ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲೆಯನ್ನೂ ದೆಹಲಿಯ ‘ಗರಿ’ ಸ್ಟುಡಿಯೋದಲ್ಲಿ ಮುದ್ರಣತಂತ್ರವನ್ನೂ ಇವರು ಕಲಿತಾಗ, ಈ ಶಾಲೆಗಳ ಹೆಸರು ಇವರಿಗೆ ಕಲಾವಿದರಾಗಿ ಸ್ಥಾಪಿತರಾಗಲು ಹೆಚ್ಚೇನೂ ಸಹಾಯಕಾರಿಯಾಗಲಿಲ್ಲ ಎಂಬುದು ಇವರ ಅಭಿಪ್ರಾಯ.


ಇಂದು ಕಲಾವಿದ ಯೂಸುಫರನ್ನು ನಾವು ಸ್ಮರಿಸಿಕೊಳ್ಳುವುದಕ್ಕೆ ಇರುವ ಕಾರಣಗಳಲ್ಲಿ ಅವರ ಕಲಾಕೃತಿಗಳು ಮುಖ್ಯವಾಗುತ್ತವೆ ಎಂಬುದು ನಿಜ. ಆದರೆ ಅದಕ್ಕಿಂತಲೂ ಮುಖ್ಯವಾಗುವುದು, ‘ಕಲಾಸಮೂಹ’ವೊಂದರ ಸೃಷ್ಟಿಯ ಬಗ್ಗೆ ಅವರಿಗಿದ್ದ ಆಸಕ್ತಿ. ಔಪಚಾರಿಕ ಕಲಾಗುಂಪುಗಳಾದ ತಮಿಳುನಾಡಿನ ಚೋಳಮಂಡಲಂ, ಬೆಂಗಾಲದ ಶಾಂತಿನಿಕೇತನಗಳ ಲೋಕದೃಷ್ಟಿಯನ್ನು ನಿರಾಕರಿಸುತ್ತಲೇ, ಸಹಜವಾಗಿ ರೂಪುಗೊಂಡು ರೂಪಾಂತರಗೊಳ್ಳುವ ಯುವ ಕಲಾತಂಡವನ್ನು ಅವರು ಪ್ರೋತ್ಸಾಹಿಸುತ್ತಿದ್ದರು. ತಮ್ಮಂತೆ ಅಕ್ಷರಶಃ ಬೀದಿಯಲ್ಲಿ ಬದುಕಿ, ಬಡತನದ ಪೊರೆ ಕಳಚಿಕೊಳ್ಳುತ್ತ ಬೆಳೆಯುತ್ತಿದ್ದ ಕಲಾವಿದರನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಆಸ್ಥೆ. ಅವರ ಕೃತಿಗಳನ್ನು ಇವರು ಸ್ವತಃ ಕಲಾಪೋಷಕರೆಂಬಂತೆ ಕೊಳ್ಳುತ್ತಿದ್ದರು, ತಮ್ಮ ಕೃತಿಗಳ, ತಮ್ಮ ಗ್ಯಾಲರಿ ಪ್ರದರ್ಶನಗಳ ಬಗ್ಗೆ ಬರೆವವರಿಗೆ ಧಾರಾಳವಾಗಿ ದನಸಹಾಯ ಮಾಡುತ್ತಿದ್ದರು, ಇತರರನ್ನೂ ಹಾಗೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಯಾವುದೇ ಒಂದು ನಿರ್ದಿಷ್ಟತೆಯನ್ನು, ತಮ್ಮ ಕೃತಿಯ ಒಳಗಾಗಲಿ ತಮ್ಮ ದೈನಂದಿನ ಕೃತಿಯಲ್ಲಾಗಲಿ, ಅವರು ಒಪ್ಪುತ್ತಿರಲಿಲ್ಲ.


ಸ್ವತಃ ಅವರ ಕೃತಿಗಳೂ ಅಂತಹವೇ: ಕಲೆಯ ವಿಮರ್ಶಾತ್ಮಕ ದೃಷ್ಟಿಯಿಂದ ಅವರ ಕೃತಿಗಳು ಎಕ್ಸ್‌ಪ್ರೆಷನಿಸಂ ಪಂಥವನ್ನು ಹೋಲುತ್ತವೆ. ನಗರಜೀವನದ ಘೋರ ಅಂಧಕಾರದಂತೆ ಅವರ ಕ್ಯಾನ್ವಾಸುಗಳಲ್ಲಿ ನಿಗೂಢ ವರ್ಣಗಳ ಮಸುಕು ಇದೆ. ಅಲ್ಲಿ ನಗರೀಕರಣದ ಹೊಡೆತಕ್ಕೆ ಏಕಾಂಗಿಯಾದಂತೆ ಅತಿ ಗಿಡ್ಡ ಆಕಾರಗಳು, ಆ ವ್ಯಕ್ತಿಗಳು ಕಾಗದದಲ್ಲಿ ತಯಾರಾದವೇನೋ ಎಂಬಷ್ಟು ವ್ಯಕ್ತಿತ್ವದ ಖಾಲಿತನ, ಇವೆಲ್ಲ ಅವರ ಚಿತ್ರಗಳ ಸಾರ. ಆದರೆ ಇವುಗಳ ನಡುವೆಯೇ, ಪಂಡಿತ ಪಾಮರರಿಬ್ಬರನ್ನೂ ಒಪ್ಪಿಸಿಬಿಡುವಂತೆ ‘ಗುಜರ್ನಿಕಾ’ (ಪಿಕಾಸೋನ ಜಗತ್ಪ್ರಸಿದ್ಧ ‘ಗಾರ್ನಿಕ’ ಕೃತಿಯ ಪ್ರಭಾವ), ಜರ್ಮನಿಯ ಕಲಾವಿದೆ ಕ್ಯಾತೆ ಕೋಲ್‌ವಿಜಳ ನೆನಪಿಗೆ ನಿರೂಪಿಸಿದ ಚಿತ್ರಸರಣ, ಇವೆಲ್ಲವೂ ಎಲ್ಲೋ ಆ ಮುನ್ನವೇ ಆಗಿಹೋದಂತೆನಿಸಿಬಿಡುತ್ತಿದ್ದವು. ತಮ್ಮ ಚಿತ್ರಗಳೊಳಗೆ ವ್ಯಕ್ತಿತ್ವಗಳು ಹೇಗೆ ಬರಡಾಗಿಬಿಡುತ್ತವೋ ಹಾಗೇ ತಾವೂ ಆದಂತೆ ಯೂಸುಫ್ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದು ಒಂದು ಸಫಲ ಪ್ರಯೋಗವೆಂಬುದನ್ನು ಒಪ್ಪಲೂ ಸಹ ನಮ್ಮ ವಿಮರ್ಶೆ ತಮಾರಿಲ್ಲವೇನೋ!


ಆದ್ದರಿಂದಲೇ ಮೊದಲಿನಿಂದಲೂ ಕಲಾವಿದರಾಗಿ ಯೂಸಫ್ ತಮ್ಮದೇ ಒಂದು, ಔಪಚಾರಿಕ ಗುಂಪಲ್ಲದ ವಲಯದ ಸೃಷ್ಟಿಯೊಂದಿಗೆ ಒಂದು ಬಹುಮುಖಿ ವ್ಯಕ್ತಿತ್ವದ ಪ್ರಾಮುಖ್ಯತೆಯನ್ನೂ ಮನಗಂಡಂತೆ ತಮ್ಮನ್ನು ರೂಪಿಸಿಕೊಂಡಂತಹ ‘ಸ್ವಯಂಭೂ’. ವಿಮರ್ಶೆಯ ಗುಣಮಟ್ಟವು ಇಷ್ಟವಾಗದಾಗ ತಾವೇ ಕಲಾವಿಮರ್ಶೆಯನ್ನು ಪತ್ರಿಕೆಗಳಿಗೆ ಬರೆದರು, ಒಂದೇ ಕಲಾಪ್ರಕಾರಕ್ಕೆ ಕೆಲವರು ಪ್ರಸಿದ್ಧರಾಗುತ್ತಿದ್ದಾಗ, ಚಿತ್ರ-ಶಿಲ್ಪ-ಭಿತ್ತಿ-ಕಾವ್ಯ ಇವೆಲ್ಲಗಳನ್ನೂ ಸೃಷ್ಟಿಸತೊಡಗಿದ್ದರು. ಕೊನೆಯವರೆಗೂ ಯೂಸುಫ್ ತಮ್ಮನ್ನು ತಾವೇ ಪುನರ್-ನಿರೂಪಿಸಿಕೊಳ್ಳುತ್ತಿದ್ದರು, ತಾವೇ ಒಂದು ಮೂಲ, ಅನನ್ಯ ಮಾದರಿಯಾಗಲು ಇಚ್ಛಿಸಿದರು.


ಯೂಸುಫ್ ಅರಕ್ಕಲ್ ಅವರ ಇಂತಹ ವೈಯಕ್ತಿಕ, ವ್ಯಕ್ತಿಗತ ಇತಿಹಾಸವು ಸಬಾಲ್ಟರ್ನ್ ಅಥವಾ ಅಂಚಿನ-ಸೃಜನಶೀಲತೆಗೆ ಮಾದರಿಯಾಗಬಲ್ಲಂತಹದ್ದು. ಹೆಸರು, ಸಾಮಾಜಿಕ ಸೌಕರ್ಯಗಳನ್ನೆಲ್ಲ ಪಡೆದ ನಂತರವೂ ಸಹ ಅವರು ಒಂಟಿತನವನ್ನು ಚಿತ್ರಿಸಿದ್ದು ಅರ್ಥಪೂರ್ಣ. ಕನ್ನಡ ಸಾಹಿತ್ಯದ ನವ್ಯ ಪಂಥದ ವ್ಯಕ್ತಿಗತ ಗುಣವನ್ನು ಹೋಲುವ ದೃಶ್ಯಪರ್ಯಾಯವಿದು. ತಮ್ಮ ಬದುಕನ್ನೇ ತಮ್ಮ ಕೃತಿಯ ವಿಷಯವನ್ನಾಗಿಸಿದ್ದು ಅವರ ಮೊದಲ ಸಾಧನೆಯಾದರೆ, ತಮ್ಮ ಚಿತ್ರಣಶೈಲಿಯನ್ನು ಮಾತ್ರ ಎಕ್ಸ್‌ಪ್ರೆಷನಿಸಂನಿಂದ ರೂಢಿಸಿಕೊಂಡದ್ದು ಅವರ ವೈರುಧ್ಯಮಯ ವ್ಯಕ್ತಿತ್ವಕ್ಕೆ ಸಾಕ್ಷಿ. ಇವರಿಗೆ ದೊರೆತ ಮಾರುಕಟ್ಟೆ ಅಥವ ತಾವಾಗಿ ರೂಢಿಸಿಕೊಂಡ ಮಾರುಕಟ್ಟೆಯು ಅವರಿಗೆ ಎಂಥಾ ಸಾಮಾಜಿಕ/ಅಭಿವ್ಯಕ್ತಿಯ ಸ್ವಾಂತಂತ್ರ್ಯವನ್ನು ದೊರಕಿಸಿಕೊಟ್ಟಿಬಿಟ್ಟಿತೆಂದರೆ, ಅವರು ಸೃಷ್ಟಿಸಿದ್ದೆಲ್ಲವೂ ಮಾರಾಟವಾಯಿತು, ಜನಪ್ರಿಯವಾಯಿತು, ಆದರೆ ವಿಮರ್ಶಾತ್ಮಕವಾಗಿ ಸ್ವೀಕಾರವಾಗಲಿಲ್ಲ. ಕಲಾವಿಮರ್ಶಕರು ಒಂದು ಎಚ್ಚರದಿಂದಲೇ ಅವರ ಕಲಾವ್ಯಕ್ತಿತ್ವವನ್ನು ಗಮನಿಸುತ್ತಿದ್ದರು. ಹಾಗೆ ನೋಡಿದರೆ ದೃಶ್ಯಕಲೆಗಿಂತಲೂ ಕನ್ನಡ ಸಾಹಿತ್ಯವು ಇವರನ್ನು ಹೆಚ್ಚು ಜನಪ್ರಿಯಗೊಳಿಸಿತ್ತು. ಕೆ.ಜಿ.ಸುಬ್ರಹ್ಮಣ್ಯನ್ ಮತ್ತು ಎಂ.ಎಫ್.ಹುಸೇನರ ಮಾದರಿಗಳ ನಡುವೆ ಎರಡನೆಯದರೆಡೆಗೇ ಹೆಚ್ಚಾಗಿ ಯೂಸುಫ್ ಕಲಾತ್ಮಕವಾಗಿ ಬಾಗಲು ಇದ್ದ ಕಾರಣ ತಾವು ಸೃಜನಶೀಲತೆಯನ್ನು ರಕ್ತಗತವಾಗಿ ಪಡೆದುಕೊಂಡದ್ದಾಗಿರದೆ ಸ್ವತಃ ರೂಢಿಸಿಕೊಂಡದ್ದು. ಜೊತೆಗೆ, ಇವರ ಗೆಳೆಯ ಬರೋಡದ ಕಲಾವಿದ ಧುಮಾಲ್ ಜನಪ್ರಿಯವಾಗಿ ಹೇಳಿರುವಂತೆ ಅರೆಬೆಂದ ಜನ ಮಾತ್ರ ಗುಂಪುಗಳಲ್ಲಿ ಬದುಕುತ್ತಾರೆ ಎಂಬುದನ್ನು ನಂಬಿದಂತೆ ಬದುಕಿ, ಅಂತಹುದಲ್ಲದ ಮಾದರಿಯೊಂದನ್ನು ಅದರ ಫಲಶೃತಿಯನ್ನೂ ಉಳಿಸಿಹೋದ ಕಲಾವಿದ ಯೂಸುಫ್ ಅರಕ್ಕಲ್.///